ತುಮಕೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುತ್ತಿದ್ದಾರೆಂಬ ಕಾರಣದಿಂದ ತುಮಕೂರು ಲೋಕಸಭಾ ಕ್ಷೇತ್ರ ಇಡೀ ದೇಶದಲ್ಲಿಯೇ ಹೆಚ್ಚು ಆಕರ್ಷಿತವಾಗಿದೆ. ಮೈತ್ರಿ ಅಭ್ಯರ್ಥಿಯಾದರೂ ದೇವೇಗೌಡರ ಪರ ಇಲ್ಲಿನ ಜನರಿಗೆ ಅಷ್ಟೇನೂ ಒಲವು ಕಾಣಿಸುತ್ತಿಲ್ಲ. ಆ ಕಾರಣದಿಂದ ಗೆಲವು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು.

ಮತದಾನಕ್ಕೆ ದಿನ ಸಮೀಪಿಸುತ್ತಿದ್ದಂತೆ, ಅಭ್ಯರ್ಥಿಗಳ ಹಗ್ಗಜಗ್ಗಾಟ ಜೋರಾಗಿದೆ. ಮೋದಿ ಹೆಸರಿನಲ್ಲಿಯೇ ಬಿಜೆಪಿ ಮತಯಾಚಿಸುತ್ತಿರುವುದರಿಂದ ಎಲ್ಲರೂ ಮೋದಿ ವಿರುದ್ಧವೇ ಮಾತಿನ ಬಾಣ ಬಿಡುತ್ತಿದ್ದಾರೆ. ಇಲ್ಲಿ ಸಚಿವೆ ಜಯಾಮಾಲ ಮಾತನಾಡಿ, ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ....

'ಈ ದೇಶದ ಮಹಿಳೆಯರಿಗಾಗಿ ಯಾವ ಯೋಜನೆ ರೂಪಿಸಿದ್ದಾರೆ ಮೋದಿ. ಸುಳ್ಳು ಹೇಳಿ ಹೇಳಿ 5 ವರ್ಷ ಗಟ್ಟಿಯಾಗಿ ಕುಳಿತ್ತಿದ್ರಿ. ಮಹಿಳೆಯರಿಗಾಗಿ ಏನಾದ್ರೂ ಒಂದು ಯೋಜನೆ ತರ್ಬೇಕು ಅಂತಾ ಅನಿಸ್ಲಿಲ್ವಾ? ರಾಹುಲ್ ಗಾಂಧಿಯನ್ನು, ಕಾಂಗ್ರೆಸನ್ನು ಕೌಂಟರ್ ಮಾಡ್ತೀರಿ. ಅದನ್ನ ಬಿಟ್ಟು ಬೇರೆ ಏನು ಮಾಡ್ತಿಲ್ಲ. ಬರೀ ಸುಳ್ಳು ಹೇಳಿ, ನಮ್ಮ ಭಾವನೆಗಳ ಜೊತೆ ಆಡಿದ್ದೀರಾ?,' ಎಂದರು.

'ಈ ರಾಜ್ಯದ ಬಗ್ಗೆ ಮಾತಾಡ್ಬೇಕಾದ್ರೇ ಬಹಳ ಹುಷಾರಾಗಿರಿ. ಈ‌ ಹಿಂದೆ ಸಿದ್ದರಾಮಯ್ಯ ಕೊಟ್ಟಿರೋ ಯೋಜನೆ ನಿಮಗೆ ವಿಷನ್ ಕೂಡ ಮಾಡಿಕೊಳ್ಳೋಕೆ ಆಗಲ್ಲ. ಮಾಜಿ ಪ್ರಧಾನಿ ನಮ್ಮ ಕರ್ನಾಟಕದ ಆಸ್ತಿ. ಅವ್ರ ಬಗ್ಗೆ ಲೇವಡಿ ಮಾಡ್ತಾರೆ. ಅವ್ರೂ ಇಡೀ ದೇಶದಲ್ಲಿ ಎಲ್ಲಿ ಬೇಕಾದ್ರೂ ನಿಲ್ಲಬಹುದು. 87 ವರ್ಷ ಆದ್ರೂ ತನ್ನ‌ ಜವಾಬ್ದಾರಿ ಅರಿತು ಸೇವೆ ಮಾಡ್ತಿದ್ದಾರೆ,' ಎಂದು ಮೋದಿ ಪರ ಜಯಮಾಲಾ ಬ್ಯಾಟಿಂಗ್ ಮಾಡಿದ್ದಾರೆ.