ಜೈಲಿಗೆ ಹೋಗಿ ಬಂದ ಬಿಎಸ್‌ವೈ, ರೆಡ್ಡಿ ಬಿಜೆಪಿ ಚೌಕೀದಾರರು: ಸಿದ್ದು| ಮೋದಿ, ಮಲ್ಯಗೆ ಬಿಜೆಪಿಗರು ಚೌಕೀದಾರ್‌

ಬೀದರ್‌[ಏ.03]: ‘ಜೈಲಿಗೆ ಹೋಗಿ ಬಂದ ಬಿ.ಎಸ್‌. ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು, ಜನಾರ್ದನ ರೆಡ್ಡಿ ಚೌಕಿದಾರರಂತೆ. ನೋಟು ಎಣಿಸುವ ಮಷಿನ್‌ ಇಟ್ಟುಕೊಂಡಿರುವ ಈಶ್ವರಪ್ಪನೂ ಚೌಕಿದಾರನಂತೆ. ಇದೊಂದು ಫ್ಯಾಶನ್‌ ಆಗಿದೆ...’

-ಪ್ರಧಾನಿ ಮೋದಿ ಪರವಾಗಿ ಬಿಜೆಪಿ ನಡೆಸುತ್ತಿರುವ ‘ಮೈ ಭೀ ಚೌಕೀದಾರ್‌’ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್‌ ನೀಡಿದ್ದು ಹೀಗೆ.

ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು ಬಡವರಿಗೆ ಚೌಕೀದಾರನಲ್ಲವೋ ಅಂಥವರು ಅಧಿಕಾರಕ್ಕೇರಲು ನಾಲಾಯಕ್‌ ಎಂದು ಗುಡುಗಿದರು. ಇವರೆಲ್ಲ ಚೌಕೀದಾರರಾಗಿರುವುದು ದೇಶಕ್ಕಲ್ಲ. ದೇಶದ ಹಣ ಲೂಟಿ ಮಾಡಿ ಓಡಿ ಹೋದ ನೀರವ್‌ ಮೋದಿ, ವಿಜಯ್‌ ಮಲ್ಯನಂಥವರಿಗೆ ಚೌಕೀದಾರರಾಗಿದ್ದಾರೆ. ದೇಶದ ಜನತೆ ಇವರಿಗೆ ತಕ್ಕ ಪಾಠ ಕಲಿಸುವ ಸಮಯ ಈ ಚುನಾವಣೆಯಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಶೋಷಿತ, ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿ ತೆಗೆಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಪದ್ಧತಿ ಉಳಿಯೊಲ್ಲ ಎಂದು ಭವಿಷ್ಯ ನುಡಿದರು. ಕೋಲಿ, ಗೊಂಡ, ರಾಜಗೊಂಡ, ಕುರುಬ ಸುಮುದಾಯಗಳೆಲ್ಲವೂ ಒಂದೇ. ಇವರೆಲ್ಲ ಎಸ್‌ಟಿಗೆ ಸೇರ್ಪಡೆಯಾಗಬೇಕೆಂದು ನಾನು ಎರೆಡೆರಡು ಬಾರಿ ರಾಜ್ಯ ಸರ್ಕಾರದಿಂದ ಶಿಫಾರಸು ಕಳಿಸಿದ್ದೆ ಎಂದು ಆರೋಪಿಸಿದರು.

ಬಿಜೆಪಿಯವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಒಂದೇ ಒಂದು ಸೀಟನ್ನೂ ಹಿಂದುಳಿದ ವರ್ಗದವರಿಗೆ ನೀಡಿಲ್ಲ. ಅಲ್ಪಸಂಖ್ಯಾತರ ಮಾತಂತೂ ಇಲ್ಲವೇ ಇಲ್ಲ. ದಿನ ಬೆಳಗಾದರೆ ಹಿಂದುಳಿದವರ ಪರ ಮಾತೆತ್ತುವ ಕೆ.ಎಸ್‌.ಈಶ್ವರಪ್ಪ ಅವರಿಗೆ ಮರ್ಯಾದೆ ಇದ್ದರೆ ಆ ಪಕ್ಷ ಬಿಟ್ಟು ಹೊರಬರಬೇಕು ಎಂದು ಸಿದ್ದರಾಮಯ್ಯ ಸವಾಲೆಸೆದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಮುಖಂಡರು ಇದ್ದರು.

ದಕ್ಷಿಣದಲ್ಲಿ ‘ಕೈ’ ಬಲಪಡಿಸಲು ರಾಹುಲ್‌ ಗಾಂಧಿ ಸ್ಪರ್ಧೆ

ಹುಬ್ಬಳ್ಳಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೋಲಿನ ಭೀತಿಯಿಂದ ವಯನಾಡಿಗೆ ಹೋಗುತ್ತಿಲ್ಲ, ಬದಲಾಗಿ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗಾಗಿ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇರಳದಲ್ಲಿ ಅವರ ಸ್ಪರ್ಧೆಯಿಂದ ದಕ್ಷಿಣ ಭಾರತದಲ್ಲಿ ಪಕ್ಷಕ್ಕೆ ಇನ್ನಷ್ಟುಬಲ ಬರಲಿದೆ ಎಂದರು. ಇದೇವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲವು ಕಾಣಲಿದ್ದಾರೆ. ಕಾಂಗ್ರೆಸ್‌ ದೇಶದಲ್ಲಿ 150ಕ್ಕೂ ಅಧಿಕ ಸ್ಥಾನ ಗೆಲ್ಲಲಿದ್ದು, ಯುಪಿಎ ಮೈತ್ರಿಕೂಟ 300 ಸ್ಥಾನಗೆದ್ದು ಅಧಿಕಾರ ಹಿಡಿಯಲಿದೆ ಎಂದರು.