ತಿರುವನಂತಪುರಂ[ಏ,22]: ಶಬರಿಮಲೆ ಪ್ರತಿ​ಭ​ಟ​ನೆ​ಯ​ಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ಮುಖಂಡ, ಪಟ್ಟಣಂತಿಟ್ಟಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್‌ ತಮ್ಮ ವಿರುದ್ಧ 242 ಕ್ರಿಮಿ​ನ​ಲ್‌ ಪ್ರಕರಣಗಳು ದಾಖ​ಲಾ​ಗಿ​ರುವ ಬಗ್ಗೆ ನಾಲ್ಕು ಪುಟಗಳ ಜಾಹೀರಾತೊಂದನ್ನು ನೀಡಿದ್ದಾರೆ. ಬಿಜೆಪಿ ಮುಖವಾಣಿ ‘ಜನ್ಮಭೂಮಿ’ ಪತ್ರಿಕೆಯಲ್ಲಿ ನಾಲ್ಕು ಪುಟಗಳ ಜಾಹೀರಾತು ಪ್ರಕಟಗೊಂಡಿದೆ. 242 ಪ್ರಕರಣಗಳ ಪೈಕಿ 222 ಪ್ರಕರಣಗಳು ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿವೆ.

ಅಂತೆಯೇ ಈ ಎಲ್ಲಾ ಮಾಹಿತಿಗಳಿರುವ 60 ಸೆಕೆಂಡ್‌ಗಳ ಜಾಹೀರಾತನ್ನು ಪಕ್ಷಕ್ಕೆ ಸೇರಿದ ‘ಜನ್ಮಟೀವಿ’ಯಲ್ಲೂ ಪ್ರಸಾರ ಮಾಡಲಾಗಿದೆ. ಒಂದು ವೇಳೆ ಬೇರೆ ಪತ್ರಿ​ಕೆ​ಗಳ ಒಂದೇ ಆವೃ​ತ್ತಿ​ಯಲ್ಲಿ ಈ ಜಾಹೀ​ರಾತು ನೀಡಿ​ದ್ದರೆ ಕನಿಷ್ಠ 60 ಲಕ್ಷ ರು. ಬೇಕಾಗುತ್ತಿತ್ತು. ಟೀವಿ ಚಾನೆಲ್‌ಗಳಿಗೆ ಇದಕ್ಕಿಂತ ಜಾಸ್ತಿ ಹಣವನ್ನು ವ್ಯಯಿಸಬೇಕಿತ್ತು. ಶಬರಿಮಲೆ ಪ್ರಕರಣದಲ್ಲಿ 22 ದಿನ ಜೈಲುವಾಸ ಅನುಭವಿಸಿ ಬಂದಿರುವ ಸುರೇಂದ್ರನ್‌ ಚುನಾವಣಾ ಆಯೋಗದ ಸೂಚನೆ ಮೇರೆಗೆ ಈ ಜಾಹೀರಾತು ನೀಡಿದ್ದಾರೆ.

ಒಂದೊಮ್ಮೆ ಜಾಹೀರಾತು ನೀಡದೇ ಇದ್ದಲ್ಲಿ ನಾಮಪತ್ರ ಅನರ್ಹಗೊಳ್ಳುವ ಸಾಧ್ಯತೆ ಇತ್ತು. ಈ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಕೇಸಿನ ಕುರಿತು 3 ಬಾರಿ ಜಾಹೀರಾತು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.