ರಾಜಕಾರಣಿಗಳ ಮನೆಯಿಂದ ಹುಳ ಬಂದಂತೆ ಹೊರ ಬರುತ್ತಿರುವ ಹಣ| ತಮಿಳುನಾಡಿನಲ್ಲಿ ಐಟಿ ದಾಳಿಯ ಪರಿಣಾಮ ಕಾಳಧನದ ನಗ್ನ ನರ್ತನ| AMMK ಮುಖ್ಯಸ್ಥ TTV ದಿನಕರನ್ ಆಪ್ತ ಮನೆ ಮೇಲೆ ಐಟಿ ದಾಳಿ| 1.5 ಕೋಟಿ ರೂ ಅಕ್ರಮ ಹಣ ವಶ| 300 ರೂ. ನ ಪ್ರತ್ಯೇಕ ಪೊಟ್ಟಣಗಳ ರಾಶಿ| ಡಿಎಂಕೆ ಸಂಸದೆ ಕನ್ನಿಮೊಳಿ ಮನೆ ಮೇಲೂ ಐಟಿ ದಾಳಿ|
ಅಂಡಿಪಟ್ಟಿ(ಏ.17): ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದ್ದ ತಮಿಳುನಾಡಿಗೆ,ಐಟಿ ದಾಳಿ ಮತ್ತದರ ಪರಿಣಾಮವಾಗಿ ಕಾಳಧನದ ನಗ್ನ ನರ್ತನದ ದರ್ಶನವಾಗುತ್ತಿದೆ.
ಎಲ್ಲರಂತೆ ಚುನಾವಣೆಗೆ ಸಜ್ಜಾದ ರಾಜಕಾಣಿಗಳೂ ಕೂಡ ತಮ್ಮ ತಮ್ಮ ಮನೆಯಲ್ಲೇ ನೂರಾರು ಕೋಟಿ ರೂಪಾಯಿಗಳನ್ನಿಟ್ಟು ಪ್ರಜಾಪ್ರಭುತ್ವದ ಖರೀದಿಗೆ ಮುಂದಾಗಿದ್ದಾರೆ.
AMMK ಪಕ್ಷದ ಮುಖ್ಯಸ್ಥ TTV ದಿನಕರನ್ ಆಪ್ತನೋರ್ವನ ಮನೆಯಲ್ಲಿ ಸುಮಾರು 1.48 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿದೆ. ಇಲ್ಲಿನ ಅಂಡಿಪಟ್ಟಿ ನಗರದಲ್ಲಿರುವ ದಿನಕರನ್ ಆಪ್ತನ ಮನೆಗೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ನೂರಾರು ಕೋಟಿ ಅಕ್ರಮ ಹಣ ಪತ್ತೆ ಹಚ್ಚಿದ್ದಾರೆ.
300 ರೂ.ನಂತೆ ಪ್ರತ್ಯೇಕ ಪೊಟ್ಟಣಗಳ ರಾಶಿಯೇ ಐಟಿ ದಾಳಿ ವೇಳೆ ಸಿಕ್ಕಿ ಬಿದ್ದಿದ್ದು, ಒಂದು ಮತಕ್ಕೆ ಒಂದು ಪೊಟ್ಟಣದ ಲೆಕ್ಕಾಚಾರದಲ್ಲಿ ಇವುಗಳನ್ನು ರವಾನಿಸಲು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ.
ಆಡಳಿತಾರೂಢ AIADMK ಪಕ್ಷದಿಂದ ಹೊರಬಂದು ಅಮ್ಮಾ ಮಕ್ಕಳ್ ಮುನ್ನೇತ್ರ ಕಜಗಂ ಪಕ್ಷ ಕಟ್ಟಿರುವ TTV ದಿನಕರನ್, ಚುನಾವಣೆ ಹೊತ್ತಲ್ಲಿ ಐಟಿ ದಾಳಿಯನ್ನು ಎದುರಿಸಬೇಕಾಗಿದೆ.
ಇನ್ನು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸಹೋದರಿ ಹಾಗೂ ಸಂಸದೆ ಕನ್ನಿಮೋಳಿಯ ತೂತುಕುಡಿಯಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ಫ್ಲೇಯಿಂಗ್ ಸ್ಕ್ವಾಡ್ ನೊಂದಿಗೆ 10 ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
ತಮ್ಮ ವಿರುದ್ಧದ ಐಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಕನ್ನಿಮೋಳಿ, ಇಂತಹ ಹೇಡಿ ಕೃತ್ಯಗಳಿಂದ ನನ್ನ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ತಮಿಳುನಾಡಿನಾದ್ಯಂತ ವಿವಿಧೆಡೆ ನಡೆದ ದಾಳಿ ವೇಳೆಯಲ್ಲಿ 135.41 ಕೋಟಿ ರೂಪಾಯಿಯನ್ನು ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿವೆ ಎಂದು ಐಟಿ ಮೂಲಗಳು ತಿಳಿಸಿವೆ.
