ಬೆಂಗಳೂರು, (ಮಾ.11): ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಆಯ್ಕೆ ಬಹುತೇಕ ಫೈನಲ್ ಆಗಿದ್ದು, ಅಧಿಕೃತ ಘೋಷಣೆ ಮಾಡುವುದು ಮಾತ್ರ ಬಾಕಿ ಇದೆ.

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್​ಕುಮಾರ್​ ಅವರ ಪತ್ನಿ ತೇಜಸ್ವಿನಿ ಹೆಸರು ಮಾತ್ರ ಹೈಕಮಾಂಡ್‌ಗೆ ಕಳುಹಿಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಟಿಕೆಟ್ ಫೈಟ್: ಅನಂತ್‌ ಕ್ಷೇತ್ರದಲ್ಲಿ ಪತ್ನಿ ಬಿಜೆಪಿ ಅಭ್ಯರ್ಥಿ?

ಇದಕ್ಕೂ ಮೊದಲು ಅನಂತ್​ಕುಮಾರ್​ ಅವರ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ತೇಜಸ್ವಿನಿಗೆ ಸ್ಪರ್ಧೆಗೆ ಸ್ವತಃ ಆರ್. ಅಶೋಕ್, ವಿ ಸೋಮಣ್ಣ ಸೇರಿದಂತೆ ಇನ್ನಿತರ ನಾಯಕರು​ ವಿರೋಧ ವ್ಯಕ್ತಪಡಿಸುತ್ತಿದ್ದರು.

ತೇಜಸ್ವಿನಿ ಬದಲಾಗಿ ನಂದನ್ ನಂದನ್ ನಿಲೇಕಣಿ ಅವರಿಗೆ ಟಿಕೇಟ್ ನೀಡುವ ಬಗ್ಗೆ ಪಕ್ಷದಲ್ಲಿ ಪ್ರಸ್ತಾವಾಗಿತ್ತು. ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರು ನಗರ ಬಿಜೆಪಿ ಮುಖಂಡರ ಸಭೆ ನಡೆಸಿ ಸಂಧಾನ ಮಾಡಿದ್ದರು.

ಬೆಂಗಳೂರು ದಕ್ಷಿಣ: ಬಿಜೆಪಿಯಿಂದ ಕೇಂದ್ರ ಸಚಿವರ ಹೆಸ್ರು?

ಅಂದಿನ ಸಭೆಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿತ್ತು. ಅದರಂತೆ ಇಂದು (ಸೋಮವಾರ) ತೇಜಸ್ವಿನಿ ಅವರು ಆರ್​. ಅಶೋಕ್​ ಅವರನ್ನು ಭೇಟಿಯಾಗಿ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಚರ್ಚೆ ನಡೆಸಿದರು. 

ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಇಬ್ಬರೂ ಮಾತುಕತೆ ನಡೆಸಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಈ ವೇಳೆ ಅನಂತಕುಮಾರ್​ ಅವರ ಸಹೋದರ ಕೂಡ ಉಪಸ್ಥಿತರಿದ್ದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿನಿ ಅನಂತ್​ಕುಮಾರ್​, 'ಬೆಂಗಳೂರಿಗಾಗಿ ಅಶೋಕ್​ ಸಾಕಷ್ಟು ಕೆಲಸ ಮಾಡಿದ್ದಾರೆ.

ಹೀಗಾಗಿ ಅವರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ಬಂದಿದ್ದೇನೆ‌. ಇನ್ನು ಹಲವು ನಾಯಕರ ಭೇಟಿ ಮಾಡಿ ಚರ್ಚೆ ಮಾಡಲಿದ್ದೇನೆ' ಎಂದು ಹೇಳುವ ಮೂಲಕ ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಯುವ ಬಗ್ಗೆ ಸುಳಿವು ನೀಡಿದರು.

ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯಿಂದ ತೇಜಸ್ವಿನಿ ಅವರು ಅಖಾಡಕ್ಕಿಳಿಯುವುದು ಪಕ್ಕಾ ಆಗಿದ್ದು, ಈ ಬಗ್ಗೆ ಹೈಕಮಾಂಡ್ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಪ್ರಿಯಾಕೃಷ್ಣ ಹಾಗೂ ಹಿರಿಯ ನಾಯಕ ರಾಮಲಿಂಗರೆಡ್ಡಿ ಅವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿತ್ತು. ಆದ್ರೆ ಇವರಿಬ್ಬರು ಸ್ಪರ್ಧೆಗೆ ಇಂಜರಿಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರ ಹೆಸರು ಕೇಳಿಬರುತ್ತಿದೆ.