ಕಲಬುರಗಿ: ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನೀಡಿದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಸಿಯಲ್ಲಿಯೂ ತಾವು ಸ್ಪರ್ಧಿಸಲು ಸಿದ್ಧ ಎಂದು ಸಂಸದ, ಕಲಬುರಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಶಹಾಬಾದ್‌ ಪಟ್ಟಣದಲ್ಲಿ ಭಾನುವಾರ ಮಾತನಾಡಿದ ಅವರು, ಇದು ಮೀಸಲು ಕ್ಷೇತ್ರ. ಹೀಗಾಗಿ ಕಲಬುರಗಿಯಲ್ಲಿ ಬಂದು ಚುನಾವಣೆ ಎದುರಿಸಲು ಮೋದಿಗೆ ಆಗೋದಿಲ್ಲ. ಆದರೆ, ನಾನು ಜನರಲ್‌ ಕ್ಷೇತ್ರಕ್ಕೆ ಹೋಗಿ ಚುನಾವಣೆ ಎದುರಿಸಬಹುದು. ಹೈಕಮಾಂಡ್‌ ನಿರ್ಧರಿಸಿದರೆ ನಾನು ವಾರಾಣಸಿಯಲ್ಲಿ ಸ್ಪರ್ಧಿಸುವೆ ಎಂದು ಹೇಳಿದರು.

ಸಂಸತ್ತಿನಲ್ಲಿ ಮೋದಿ ಅವರ ಕಾರ್ಯವೈಖರಿ ಬಗ್ಗೆ ನಾನು ಹಲವಾರು ಬಾರಿ ಎತ್ತಿ ತೋರಿಸಿದ್ದೇನೆ. ನೀವೇ ಹೇಳಿ ಮೋದಿ ಅವರು ನೀಡಿದ ಯಾವ ಭರವಸೆ ಈಡೇರಿದೆ. ರೈತರಿಗೆ ಮೋಸ, ಜನರಿಗೆ ಮೋಸ, ನಿರುದ್ಯೋಗಿಗಳಿಗೆ ಮೋಸ, ಹೀಗೆ ಮೋದಿ ಎಲ್ಲರಿಗೂ ಮೋಸ ಮಾಡಿದ್ದಾರೆ ಎಂದು ಹೇಳಿದರು.

ಮೋದಿ ತೋರಿಸಿ ಓಟು ಕೇಳುವ ಜಾಧವ್‌, ಅಪ್ಪನನ್ನು ತೋರಿಸಿ ಮಗನಿಗೆ ಹೆಣ್ಣು ಕೇಳಿದಂತೆ. ಇಲ್ಲೇನು ಮೋದಿ ಸ್ಪರ್ಧೆ ಮಾಡಿದ್ದಾರಾ? ಚೌಕೀದಾರ್‌ ಆರ್‌ಎಸ್‌ಎಸ್‌ನ ನಶೆಯಲ್ಲಿದ್ದು, ಸಾವಿರಾರು ಕೋಟಿ ಹಣ ದೋಚಿ ಕೆಲವರು ದೇಶ ಬಿಟ್ಟು ಹೋದಾಗ ಮೋದಿ ಎಲ್ಲಿ ಮಲಗಿದ್ದರು ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.