ರಾಯಚೂರು :  ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬಾರದು. ಒಂದು ವೇಳೆ ಅವರು ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ ಆಗುತ್ತಾರೆ. ದೇಶದಲ್ಲಿ ಚುನಾವಣೆ ನಡೆಯುವುದೇ ಅನುಮಾನವಾಗಿ ಬಿಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಯಚೂರು ಹಾಗೂ ಬಳ್ಳಾರಿಯ ಸಿರಗುಪ್ಪದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, ಐದು ವರ್ಷದ ಕಾಲ ಏನು ಮಾಡಿದ್ದೇನೆ ಎನ್ನುವುದನ್ನು ಹೇಳಲು ಸಿದ್ಧವಿರದ ಪ್ರಧಾನಿ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಚೌಕಿದಾರನಲ್ಲ, ಸಾಲಗಾರರು ಓಡಿಹೋಗಲು ಸಹಕರಿಸಿದ ಭಾಗಿದಾರ. ಜನರ ಮನಸ್ಸಿನಲ್ಲಿ ಭ್ರಮಲೋಕ ಸೃಷ್ಟಿಸಿದ ದುರಾತ್ಮ. ಅಂತಹ ವ್ಯಕ್ತಿಗೆ ಓಟು ಹಾಕಬೇಡಿ. ಭೀಕರ ಬಲಗಾಲದಿಂದ ರಾಜ್ಯದಲ್ಲಿ ರೈತರು ತತ್ತರಿಸಿದ್ದು, ರೈತರ ಸಾಲ ಮನ್ನಾ ಮಾಡುವಂತೆ ಅಂಗಲಾಚಿ ಬೇಡಿಕೊಂಡರೂ ಮನ್ನಾ ಮಾಡದ ಮೋದಿ ರೈತರಿಗೆ ಏನು ಉಪಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಗನ್‌ ಹಿಡಿದುಕೊಂಡು ಹೋಗಿದ್ರಾ?: ತಾವೊಬ್ಬರೇ ದೇಶಭಕ್ತ ಎಂದು ಎದೆಯುಬ್ಬಿಸಿ ಮಾತನಾಡುವ ಮೋದಿ ಅವರೇನು ಸರ್ಜಿಕಲ್‌ ಸ್ಟೆ್ರೖಕ್‌ ಆದಾಗ ಗನ್‌ ತಗೊಂಡು ಹೋಗಿದ್ದರಾ? ಸ್ವಾತಂತ್ರ್ಯ ಸಿಕ್ಕ ನಂತರ ದೇಶ 12 ಸರ್ಜಿಕಲ್‌ ಸ್ಟೆ್ರೖಕ್‌ ಮಾಡಿದೆ ಎಂಬುದು ಮೋದಿಗೆ ಗೊತ್ತೇ ಇಲ್ಲ. 1948ರಲ್ಲಿ ಮೊದಲು ಪಾಕಿಸ್ತಾನದ ಜತೆಗೆ ಮೊದಲ ಯುದ್ಧ ಆದಾಗ ಮೋದಿ ಹುಟ್ಟೇ ಇರಲಿಲ್ಲ ಎಂದು ಸಿದ್ದು ವ್ಯಂಗ್ಯವಾಡಿದರು. ಜತೆಗೆ, ನಾವು ಸರ್ಜಿಕಲ್‌ ಸ್ಟೆ್ರೖಕ್‌ಗಾಗಿ ನಮ್ಮ ದೇಶದ ವೀರ ಯೋಧರಿಗೆ ಸೆಲ್ಯೂಟ್‌ ಹೊಡೆಯುತ್ತೇವೆ ಎಂದು ಸಿದ್ದು ಹೇಳಿದರು.