ಮೋದಿ ವಿರುದ್ಧ ಸೋಲಿನ ಭಯ ಇಲ್ಲವೇ ಇಲ್ಲ| ಅಂಥ ಭಯ ಕಾಣಿಸಿಕೊಂಡ ದಿನ ಕೊಠಡಿಯಲ್ಲಿ ಬಂಧಿಯಾಗುವೆ| ವಾರಾಣಸಿಯಲ್ಲಿ ಸ್ಪರ್ಧಿಸದೇ ಇರುವ ಬಗ್ಗೆ ಪ್ರಿಯಾಂಕಾ ಮಾತು

ಅಮೇಠಿ[ಮೇ.02]: ಉತ್ತರಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕೆ ಇಳಿಯದೇ ಇರುವುದಕ್ಕೆ, ಸೋಲಿನ ಭಯ ಕಾರಣವಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪುನರುಚ್ಚರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ವಾರಾಣಸಿಯಲ್ಲಿ ಸ್ಪರ್ಧೆ ಮಾಡಿದರೆ ನನ್ನ ಪೂರ್ಣ ಗಮನವನ್ನು ಇಲ್ಲಿಯೇ ಕೇಂದ್ರೀಕರಿಸಬೇಕಾಗುತ್ತದೆ. ಹಾಗಾದಲ್ಲಿ ರಾಜ್ಯದ ಉಳಿದ ಭಾಗಗಳಲ್ಲಿ ಪಕ್ಷದ ಪರ ಪ್ರಚಾರ ನಡೆಸುವುದು ಸಾಧ್ಯವಾಗುವುದಿಲ್ಲ. ಈ ಅಭಿಪ್ರಾಯವನ್ನು ಪಕ್ಷದ ಹಲವು ಹಿರಿಯ ನಾಯಕರು ನನ್ನ ಗಮನಕ್ಕೆ ತಂದರು. ಹೀಗಾಗಿಯೇ ನಾನು ಕಣಕ್ಕೆ ಇಳಿಯದೇ ಇರುವ ಬಗ್ಗೆ ನಿರ್ಧಾರ ಕೈಗೊಂಡೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಮೋದಿ ವಿರುದ್ಧ ಸೋಲಿನ ಭಯದಿಂದ ಇಂಥ ನಿರ್ಧಾರ ಕೈಗೊಂಡಿರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಪ್ರಿಯಾಂಕಾ ‘ಯಾವ ದಿನ ಪ್ರಿಯಾಂಕಾ ಗಾಂಧಿಗೆ ಹೆದರಿಕೆ ಹುಟ್ಟುತ್ತದೆಯೇ, ಅಂದೇ ಆಕೆ ಕೊಠಡಿಯೊಳಗೆ ತನ್ನನ್ನು ತಾನು ಬಂಧಿ ಮಾಡಿಕೊಳ್ಳಲಿದ್ದಾಳೆ’ ಎನ್ನುವ ಮೂಲಕ ತಮಗೆ ಯಾವುದೇ ಸೋಲಿನ ಭಯ ಇಲ್ಲ ಎನ್ನುವ ಮಾತುಗಳನ್ನಾಡಿದರು.