ಹಾಸನ, [ಏ.22]: ಸಚಿವ ಎಚ್.ಡಿ. ರೇವಣ್ಣ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದ್ದ ಪ್ರಕರಣ, ತನಿಖೆ ನಡೆಸುವಂತೆ ವಿಶೇಷ ಅಧಿಕಾರಿ ಮೌನೀಶ್ ಮುದ್ಗಿಲ್ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಗೌಪ್ಯ ಪತ್ರ ಬರೆದಿದ್ದಾರೆ. 

ಏಪ್ರಿಲ್ 16 ರಂದು ರೇವಣ್ಣ ಬೆಂಗಾವಲು ವಾಹನವಾದ ಇನ್ನೋವಾ ಕಾರಿನಲ್ಲಿ 1.20 ಲಕ್ಷ ಹಣ ಸಿಕ್ಕಿದ್ದು, ಲೋಕ ಸಭಾ ಚುನಾವಣೆಗೆ ಮತದಾರರಿಗೆ ಹಂಚಲು ಹಣ ಸಾಗಾಟ ಮಾಡಲಾಗುತ್ತಿದೆ ಅನ್ನೋ ಮಾಹಿತಿ ತಿಳಿದುಬಂದಿದೆ. ಹೀಗಾಗಿ ಈ ಕುರಿತು ತನಿಖೆ ನಡೆಸುವಂತೆ ಏಪ್ರಿಲ್ 20 ರಂದೇ ಮುದ್ಗಿಲ್ ಅವರು ರಾಜ್ಯ ಚುನಾವಣಾಧಿಕಾರಿಗೆ ಗೌಪ್ಯ ಪತ್ರ ಬರೆದಿದ್ದು, ಸ್ವತಂತ್ರ ತನಿಖಾ ತಂಡದಿಂದ ಉನ್ನತ ಮಟ್ಟದ ತನಿಖೆ ಆಗಲಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೊನೆ ಕ್ಷಣದಲ್ಲಿ ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿ ಸಿಕ್ಕ ಕಂತೆ ಕಂತೆ ಹಣ

ಪ್ರಾಥಮಿಕ ತನಿಖೆ ನಡೆಸಿದ್ದ ಮುದ್ಗಿಲ್ 
ಪ್ರಕರಣ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ  ವಿಶೇಷ ಚುನಾವಣಾಧಿಕಾರಿ ಮನೀಶ್ ಮೌದ್ಗಿಲ್ ಅವರು ಚುನಾವಣಾ ಆಯೋಗಕ್ಕೆ ಪ್ರಕರಣ ಕುರಿತು ಪತ್ರ ಬರೆದಿದ್ದು, ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದ್ದು ಪೊಲೀಸ್ ವಾಹನದಲ್ಲಿ ಎಂದು ಹೇಳಿದ್ದಾರೆ. 

KA-01 MH-4477 ನಂಬರಿನ ಇನೋವಾ  ಕಾರು ಪೊಲೀಸ್ ಇಲಾಖೆಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಚುನಾವಣೆಗೆ ಹಣ ಹಂಚಲು ಈ ರೀತಿ ಪೊಲೀಸ್ ಇಲಾಖೆಯ ವಾಹನ ಬಳಸಿಕೊಂಡಿದ್ದು ಎಷ್ಟು ಸರಿ..? ಒಂದು ವೇಳೆ ಇದು ಪೊಲೀಸ್ ಇಲಾಖೆಯದ್ದೇ ಆಗಿದ್ದರೆ ಕಾನೂನು ಅಡಿಯಲ್ಲಿ ಶಿಕ್ಷೆ ಯಾಗಬೇಕು. ಅಲ್ಲದೇ ಈ ಪ್ರಕರಣವನ್ನ ಗಂಭಿರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕೆಂದು ಮನೀಶ್ ಮೌದ್ಗಿಲ್ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ
 ಏಪ್ರಿಲ್ 16ರಂದು ರೇವಣ್ಣ ಅವರ ಬೆಂಗಾವಲು ವಾಹನಗಳಲ್ಲಿ ಇನ್ನೋವಾ ಕಾರೊಂದರಲ್ಲಿ 1.2 ಲಕ್ಷ ಹಣ ಸಿಕ್ಕಿತ್ತು, ಇದರ ಸಂಬಂಧ ಹೊಳೆನರಸೀಪುರ ಠಾಣೆಯಲ್ಲಿ ಐಟಿ ಇಲಾಖೆಯು ದೂರು ನೀಡಿತ್ತು ಮತ್ತು 171 ಸಿ ಅಡಿಯಲ್ಲಿ ಎಫ್‌ಐಆರ್ ಸಹ ದಾಖಲಿಸಲಾಗಿತ್ತು.

ಇನೋವಾ KA-01 MH-4477 ಕಾರಿನಲ್ಲಿ ಸಾಗಿಸಲಾಗುತ್ತಿದ್ದ 1.2 ಲಕ್ಷ ಹಣವನ್ನು ಐಟಿ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಸೀಜ್ ಮಾಡಿದ್ದರು. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 171 ಸಿ ಅಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಮಾಹಿತಿಯನ್ನ ಹಾಸನದ ಎಸ್ ಪಿ ನನ್ನ ಗಮನಕ್ಕೆ ತಂದಿದ್ದರು.