ಕೋಲ್ಕತಾ/ನವದೆಹಲಿ[ಮೇ.14]: ಪ್ರಧಾನಿ ಮೋದಿ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನಡುವಿನ ಚುನಾವಣಾ ವಾಕ್ಸಮರದ ಬಳಿಕ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಶಾ ಮತ್ತು ದೀದಿ ನಡುವೆ ಸಮರ ಆರಂಭವಾಗಿದೆ. ಅಮಿತ್‌ ಶಾ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಜಾದವ್‌ಪುರದಲ್ಲಿ ಕಾಪ್ಟರ್‌ ಇಳಿಸಲು ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಬಿಜೆಪಿ ಟೀಕಿಸಿದ್ದರೆ, ಜನರೇ ಬರದ ಕಾರಣ, ಸ್ವತಃ ಬಿಜೆಪಿ ರಾರ‍ಯಲಿಯನ್ನು ರದ್ದು ಮಾಡಿದೆ ಎಂದು ಟಿಎಂಸಿ ತಿರುಗೇಟು ನೀಡಿದೆ.

ಸೋಮವಾರ ಜಾದವ್‌ಪುರದಲ್ಲಿ ಆಯೋಜಿಸಿದ್ದ ರಾರ‍ಯಲಿಯನ್ನು ಬಿಜೆಪಿ ಕಡೇಗಳಿಗೆಯಲ್ಲಿ ರದ್ದುಪಡಿಸಿದೆ. ಇದಕ್ಕೆ ಬಂಗಾಳ ಸರ್ಕಾರ ಶಾ ಕಾಪ್ಟರ್‌ ಇಳಿಸಲು ಅನುಮತಿ ನೀಡದ್ದೇ ಕಾರಣ. ಪಶ್ಚಿಮ ಬಂಗಾಳ ಸರ್ಕಾರ ಪ್ರಜಾಪ್ರಭುತ್ವವನ್ನು ನಿರಂಕುಶತ್ವವಾಗಿ ಬದಲಾಯಿಸಿದೆ. ಚುನಾವಣಾ ಆಯೋಗ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಈ ಆರೋಪವನ್ನು ಟಿಎಂಸಿ ನಿರಾಕರಿಸಿದೆ. ಜನರನ್ನು ಸೇರಿಸಲು ಸಾಧ್ಯವಾಗದೇ ಇದ್ದಿದ್ದಕ್ಕೆ ಬಿಜೆಪಿ ರ‍್ಯಾಲಿಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದೆ. ಬಿಜೆಪಿಯ ಆರೋಪ ಸಂಪೂರ್ಣ ನಿರಾಧಾರ. ಬಿಜೆಪಿ ರಾರ‍ಯಲಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಜನರಿಲ್ಲದ ಕಾರಣಕ್ಕೆ ಅವರಾಗಿಯೇ ರಾರ‍ಯಲಿಯನ್ನು ರದ್ದುಮಾಡಿದ್ದಾರೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದ್ದಾರೆ.

ಅಮಿತ್‌ ಶಾ ತಿರುಗೇಟು:

ಇದೇ ವೇಳೆ ಪಶ್ಚಿಮ ಬಂಗಾಳದ ಕೈನಿಂಗ್‌ನಲ್ಲಿ ಚುನಾವಣಾ ರಾರ‍ಯಲಿಯೊಂದರಲ್ಲಿ ಮಾತನಾಡಿದ ಅಮಿತ್‌ ಶಾ, ಟಿಎಂಸಿ ಸರ್ಕಾರ ತಾವು ರಾರ‍ಯಲಿಯಲ್ಲಿ ಭಾಗವಹಿಸದಂತೆ ತಡೆಯ ಬಹುದು. ಆದರೆ, ಬಿಜೆಪಿಯ ವಿಜಯ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಾನೂ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತೇನೆ. ಸಾಧ್ಯವಿದ್ದರೆ ನನ್ನನ್ನು ಬಂಧಿಸಿ ಎಂದು ಮಮತಾ ಬ್ಯಾನರ್ಜಿ ಅವರಿಗೆ ಸವಾಲು ಹಾಕಿದ್ದಾರೆ. ಕಳೆದ ವಾರ ಮೋದಿ ಕೂಡಾ ಮಮತಾಗೆ ಇದೇ ರೀತಿಯ ಸವಾಲು ಹಾಕಿದ್ದರು.