17ನೇ ಲೋಕಸಂಗ್ರಾಮದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಪಡೆದು ಪೂರ್ಣ ಬಹುಮತ ಹೊಂದಿದ್ದರೆ, ಕಾಂಗ್ರೆಸ್ ಮೂರಂಕಿ ಕೂಟ ದಾಟಿಲ್ಲ. ಈ ಹೀನಾಯ ಸೋಲು ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸಾಲುಸಾಲಾಗಿ ರಾಜೀನಾಮೆ ನೀಡುತ್ತಿದ್ದಾರೆ.
ನವದೆಹಲಿ/ಬೆಂಗಳೂರು, (ಮೇ.24): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ಹಿನ್ನೆಲೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ.
ಎನ್‌ಡಿಎ ಮೈತ್ರಿಕೂಟ 351 ಸ್ಥಾನಗಳಲ್ಲಿ ಗೆದ್ದು ಬೀಗಿದ್ರೆ, ಯುಪಿಎ 95 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಅದರಲ್ಲೂ ಕರ್ನಾಕದಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ 28 ಕ್ಷೇತ್ರಗಳ ಪೈಕಿ ತಲಾ ಒಂದರಲ್ಲಿ ಜಯಗಳಿಸಿವೆ.
ಈ ಹೀನಾಯ ಸೋಲಿನ ಹೊಣೆಹೊತ್ತು ಹಲವ ಕಾಂಗ್ರೆಸ್ ನಾಯಕರು ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಹಾಗಾದ್ರೆ ರಾಜೀನಾಮೆ ನೀಡಿದವರ್ಯಾರು..? ಈ ಕೆಳಗಿನಂತಿದೆ.
* ರಾಜ್ಯದಲ್ಲಿ ಭಾರೀ ಹಿನ್ನೆಡೆಯಾಗಿರುವುದರಿಂದ ಕರ್ನಾಟಕ ಕಾಂಗ್ರೆಸ್ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ.ಪಾಟೀಲ್ ರಾಜೀನಾಮೆ ನೀಡಿದ್ದಾರೆ.
* ಒಡಿಶಾ ಪ್ರದೇಶ್ ಕಾಂಗ್ರೆಸ್ ಕಮಿಟಿ ಮುಖ್ಯಸ್ಥ ನಿರಂಜನ್ ಪಟ್ನಾಯಕ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
* ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡೋ ಸಾಧ್ಯತೆ ಇದೆ. ನಾಳೆ (ಶನಿವಾರ) ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸೋಲಿನ ಪರಾಮರ್ಶೆ ನಡೆಯಲಿದ್ದು, ಈ ವೇಳೆ ರಾಹುಲ್ ರಿಸೈನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
* ಲೋಕಸಭೆಗೆ ಅತೀ ಹೆಚ್ಚು ಸಂಸದರನ್ನ ಕಳಿಸೋ ಉತ್ತರಪ್ರದೇಶದಲ್ಲೂ ಕಾಂಗ್ರೆಸ್ ನೆಲಕಚ್ಚಿರೋ ಕಾರಣ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ರಾಜೀನಾಮೆ ನೀಡಿದ್ದಾರೆ.
* ಇನ್ನು ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋಲುಕಂಡಿದ್ದಾರೆ. ಇದರ ಹೊಣೆಹೊತ್ತು ಅಮೇಥಿ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರ ಮಿಶ್ರಾ ಅವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇವರೆಲ್ಲರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ.
