ಮದ್ದೂರು :  ಅಂಬರೀಶ್ ಅವರಿಗೆ ರಾಜ್‌ಕುಮಾರ್‌ ಅವರಿಗಿಂತ ಹೆಚ್ಚಿನ ಗೌರವವನ್ನು ಕುಮಾರಣ್ಣ ಕೊಟ್ಟಿದ್ದಾರೆ. ಅದನ್ನು ಅವರು ಮರೆಯಬಾರದು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಶನಿವಾರ ಪ್ರಚಾರ ನಡೆಸಿದ ಅವರು, ಅಂಬರೀಶ್ ಗೆ ರಾಜಕೀಯ ಜನ್ಮ ನೀಡಿದ್ದು ನಾವು ಎಂದರು. ಅಂಬರೀಶ್ ಮಾಡದೇ ಬಿಟ್ಟಿರುವ ಅರ್ಧ ಕೆಲಸವನ್ನು ನಾವು ಮುಂದುವರೆಸಲು ಬಂದಿದ್ದೇವೆ ಎನ್ನುತ್ತಿದ್ದಾರೆ. ಅದು ಯಾವುದು, ಏನು ಕೆಲಸ ಅಂತ ನನಗೆ ಅರ್ಥವಾಗುತ್ತಿಲ್ಲ ಎಂದು ಸುಮಲತಾಗೆ ಟಾಂಗ್‌ ನೀಡಿದರು. ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಹೆಚ್ಚು ನೋವು ನಿಖಿಲ್‌ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಬಂದ ಟೀಕೆಗಳಿಂದ ಆಗಿದೆ. ನಮ್ಮ ಪಕ್ಷ ಮತ್ತು ಕುಟುಂಬವನ್ನು ನಂಬಿದ ಯಾರೊಬ್ಬರಿಗೂ ಮೋಸ ಮಾಡಿದ ಉದಾಹರಣೆ ಇಲ್ಲ. ಎಸ್‌.ಡಿ. ಜಯರಾಂ, ಎಂ.ಎಸ್‌.ಸಿದ್ದರಾಜು ಮರಣ ನಂತರ ಅವರ ಪತ್ನಿಯರಿಗೆ ಅವಕಾಶ ಕಲ್ಪಿಸಿದ್ದಾಗಿ ವಿವರಿಸಿದರು.

ಕಾವೇರಿಗಾಗಿ ಬೀದಿಗಿಳಿದು ಹೋರಾಟ:

ಕಾವೇರಿ ನೀರಿಗಾಗಿ 25 ವರ್ಷ ಹೋರಾಟ ನಡೆಸಿದ್ದೇನೆ. ಕಾವೇರಿ ವಿಚಾರದಲ್ಲಿ ಅನ್ಯಾಯವಾದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡಿದ್ದೇವೆ. ಕನ್ನಂಬಾಡಿ ಕಟ್ಟೆಯನ್ನು ಮೈಸೂರು ಮಹಾರಾಜರು ಕಟ್ಟಿಸಿದರು. ಕೇಂದ್ರದವರು ನಮ್ಮ ನೀರನ್ನು ನಮಗೇ ಬಿಡುವುದಕ್ಕೆ ತಗಾದೆ ತೆಗೆಯುತ್ತಾರೆ. 48 ಟಿಎಂಸಿ ನೀರನ್ನೂ ತಮಿಳುನಾಡಿಗೆ ಬಿಡಿ ಅಂತಾರೆ. ಈ ಬಗ್ಗೆ ಉಗ್ರ ಹೋರಾಟವನ್ನೇ ನಡೆಸಿದ್ದೇವೆ. ಇಷ್ಟೆಲ್ಲಾ ಹೋರಾಟ ನಡೆಸಿದ್ದು ರೈತರ ಸಲುವಾಗಿ, ಅವರ ಬದುಕಿನ ಸಲುವಾಗಿ ಎಂದರು.