ಬೆಂಗಳೂರು :  ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮೊಮ್ಮಗ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತವಾಗಿದ್ದರೂ ಅವರ ಕುಟುಂಬದಲ್ಲಿ ಆತಂಕ ದೂರವಾಗಿಲ್ಲ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಸ್ಥಾನ ಹೊಂದಾಣಿಕೆ ಪ್ರಕ್ರಿಯೆ ಅಧಿಕೃತವಾಗಿ ಘೋಷಿಸಿರುವುದರಿಂದ ಮಂಡ್ಯ ಜೆಡಿಎಸ್‌ ಪಾಲಾಗಿದೆ. ಹೀಗಾಗಿ, ಇದೀಗ ಕಾಂಗ್ರೆಸ್ಸಿನ ಸುಮಲತಾ ಅಂಬರೀಷ್‌ ಅವರಿಗೆ ತಮ್ಮ ಪಕ್ಷದಿಂದ ಹೊರಬಂದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಅಥವಾ ಬಿಜೆಪಿ ಅಭ್ಯರ್ಥಿಯಾಗುವುದು ಉಳಿದಿರುವ ಹಾದಿ.

ಅಲ್ಲಿಗೆ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಷ್‌ ನಡುವೆ ನೇರಾನೇರ ಹಣಾಹಣಿ ನಡೆಯುವುದರಿಂದ ಸಣ್ಣದಾದ ಆತಂಕ ಮತ್ತು ಅಳುಕು ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್‌ ಪಾಳೆಯದಲ್ಲಿ ಕಂಡು ಬಂದಿದೆ.

ಸ್ಥಳೀಯ ಕಾಂಗ್ರೆಸ್‌ ಮುಖಂಡರು ಬಹಿರಂಗವಾಗಿಯೇ ಸುಮಲತಾ ಅಂಬರೀಷ್‌ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮೇಲಾಗಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡುವ ಇಂಗಿತ ವ್ಯಕ್ತಪಡಿಸಿದೆ. ಹೀಗಿರುವಾಗ ಚುನಾವಣೆ ಫಲಿತಾಂಶ ಏನಾಗಬಹುದು ಎಂಬ ಭೀತಿ ದೇವೇಗೌಡರ ಕುಟುಂಬದ ಸದಸ್ಯರಲ್ಲಿ ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಇದ್ದದ್ದು ಸುಳ್ಳಲ್ಲ. ಇದೇ ಕಾರಣಕ್ಕಾಗಿ ಕಳೆದ ಹಲವು ದಿನಗಳಿಂದ ಕುಮಾರಸ್ವಾಮಿ ಅವರು ಮೌನಕ್ಕೆ ಶರಣಾಗಿದ್ದರು.

ಆದರೂ ಮುಂದಿಟ್ಟಹೆಜ್ಜೆಯನ್ನು ಹಿಂದಿಡದೆ ತಮ್ಮ ಸಾಮರ್ಥ್ಯ ಹಾಗೂ ಪ್ರಭಾವ ಸಾಬೀತುಪಡಿಸಲು ದೇವೇಗೌಡರ ಕುಟುಂಬ ಸಜ್ಜಾಗುತ್ತಿದೆ. ಕ್ಷೇತ್ರದಲ್ಲಿನ ಪಕ್ಷದ ಬಲ, ಒಕ್ಕಲಿಗ ಸಮುದಾಯದ ಬೆಂಬಲ ಮತ್ತು ದೇವೇಗೌಡ-ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತದಾರರ ಮನವೊಲಿಸಲು ನಿರ್ಧರಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ಅಂಬರೀಷ್‌ ಅವರಿಗೆ ವ್ಯಕ್ತವಾಗುತ್ತಿರುವ ಬೆಂಬಲ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರ ಸ್ಪರ್ಧೆಗೆ ವ್ಯಕ್ತವಾಗುತ್ತಿರುವ ವಿರೋಧದ ಅಭಿಯಾನದಿಂದ ಕಂಗೆಟ್ಟಿದ್ದ ಜೆಡಿಎಸ್‌ ನಾಯಕರು ಒಂದು ಹಂತದಲ್ಲಿ ಮಂಡ್ಯ ಕಣದಿಂದ ಹಿಂದೆ ಸರಿಯುವ ಬಗ್ಗೆಯೂ ಆಲೋಚನೆ ಮಾಡಿದ್ದರು. ಮೊದಲ ಬಾರಿಗೆ ಎದುರಿಸುತ್ತಿರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಪುತ್ರನಾಗಿ ನಿಖಿಲ್‌ ಸೋಲು ಅನುಭವಿಸಿದರೆ ಅದು ದೊಡ್ಡ ಪೆಟ್ಟು ಬೀಳಲಿದೆ ಎಂಬ ಆತಂಕದ ಚರ್ಚೆಯೂ ನಡೆದಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಈ ಕಾರಣಕ್ಕಾಗಿಯೇ ನಿಖಿಲ್‌ ಕುಮಾರಸ್ವಾಮಿ ಅವರ ಗೆಲುವಿಗಾಗಿ ತಾಯಿ ಅನಿತಾ ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಸದಸ್ಯರು ಹಲವು ದೇವಸ್ಥಾನಗಳಿಗೆ ಹರಕೆ ಹೊತ್ತಿದ್ದಾರೆ. ಅಲ್ಲದೆ, ನಿಖಿಲ್‌ ಅವರನ್ನು ಕರೆದುಕೊಂಡು ಸ್ವತಃ ತಂದೆ ಕುಮಾರಸ್ವಾಮಿ ಅವರು ಪ್ರಖ್ಯಾತ ಜ್ಯೋತಿಷಿ ಬಳಿಯೂ ಕರೆದೊಯ್ದು ಭವಿಷ್ಯ ಕೇಳಿದ್ದಾರೆ. ಅಂತಿಮವಾಗಿ ಕಣಕ್ಕಿಳಿಯುವುದೇ ಸೂಕ್ತ. ಬಂದುದೆಲ್ಲವನ್ನೂ ಎದುರಿಸೋಣ ಎಂಬ ನಿಲವಿಗೆ ಬಂದರು ಎನ್ನಲಾಗಿದೆ.