ಹಾಸನ, (ಮಾ.29): ಬಿಜೆಪಿ ಅಭ್ಯರ್ಥಿ ಎ.ಮಂಜು ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ್ದಾರೆ.

ಹಾಸನದ ತಮ್ಮ‌ ನಿವಾಸದಲ್ಲಿ ಇಂದು(ಶುಕ್ರವಾರ)ದಲಿತ ನಾಯಕರ ಸಭೆಯಲ್ಲಿ ಮಾತನಾಡುವ ವೇಳೆ ಎ.ಮಂಜು ಅವರು ದೊಡ್ಡಗೌಡ್ರ ಕುಟುಂಬದ ವಿರುದ್ಧ ಅಶ್ಲೀಲ ಪದ ಪ್ರಯೋಗ ಮಾಡಿದ್ದಾರೆ.

'ನಾನೇನಾದ್ರು ತಪ್ಪು ಮಾಡಿದ್ರೆ, ಭ್ರಷ್ಟನಾಗಿದ್ರೆ ಈ‌ ನನ್ಮಕ್ಕಳು ನನ್ನ ಸುಮ್ಮನೆ ಬಿಡ್ತಿದ್ರಾ ಎಂದು ಪರೋಕ್ಷವಾಗಿ ದೇವೇಗೌಡ್ರ ವಿರುದ್ಧ ವಾಗ್ದಾಳಿ ಮಾಡಿದರು.

ನಾನು ಒಂದು ಕಾಲದಲ್ಲಿ ಬೆಂಗಳೂರು ಆಳಿದವನು. ಈಗ ಪರಿವರ್ತನೆಯಾಗಿ ನಾನೂ ಜನರ ನಡುವೆ ಇದ್ದೇನೆ. ನಾನು ಯಾರಿಗೂ ಹೆದರಲ್ಲ, ನಿಮಗೆ ಏನಾದ್ರು  ತೊಂದರೆಯಾದ್ರೆ ನನ್ನ ಹೆಣವೇ ಮೊದಲು ಬೀಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಜಿಲ್ಲೆಯಲ್ಲಿ ‌ಕುಟುಂಬ ರಾಜಕಾರಣ ಕೊನೆಯಾಗಬೇಕು.  ಶೃಂಗೇರಿ ಶಾರದಂಬೆಗೆ ಹೋಗಿ ಪೂಜೆ ಮಾಡಿಸಿ ಬಂದ್ರು. ಐಟಿ ದಾಳಿ ನಡೆಯೋದನ್ನ ತಪ್ಪಿಸಲು ಆಯ್ತಾ ಎಂದು ಲೇವಡಿ ಮಾಡಿದರು.

ನಾವು ಪೂಜೆ ಮಾಡೊದು ಮನ ಶಾಂತಿಗಾಗಿ. ಅವರು ದೇವರನ್ನೇ ಒಲಿಸಿಕೊಂಡು ಎಲ್ಲವನ್ನೂ ಮಾಡ್ತೀನಿ ಅಂತಾರೆ. ಹಾಗೆ ಆಗೋದಾಗಿದ್ರೆ ಯುದ್ದ ವಿಮಾನ ಏಕೆ ಬೇಕಿತ್ತು. ಎರಡು ನಿಂಬೆ ಹಣ್ಣು ಹಾಕಿ ಎಲ್ಲರನ್ನ ಮುಗಿಸಿಬಿಡಬಹುದಿತ್ತು ಎಂದು ರೇವಣ್ಣ ವಿರುದ್ಧ ವ್ಯಂಗ್ಯವಾಡಿದರು.