ಮತ ಹಾಕದೇ ಮೋಜು ಮಾಡಲು ಬಂದವರಿಗೆ ಹಾರ ಹಾಕಿ ವ್ಯಂಗ್ಯ!

ಚಿಕ್ಕಮಗಳೂರಲಿ ಸ್ಥಳೀಯರಿಂದ ಬೆಂಗಳೂರಿನವರು ಸೇರಿ 200 ಪ್ರವಾಸಿಗರ ಪರಿಶೀಲನೆ ಇದು ಯಾವ ಚುನಾವಣೆ ಅಂತ ಗೊತ್ತಿಲ್ಲ ಎಂದು ಹೇಳಿದವರಿಗೆ ಶಾಲು ಹೊದಿಸಿ ಸನ್ಮಾನ

garland for the People who failed to cast their vote at Chikmagalur

ಚಿಕ್ಕಮಗಳೂರು[ಏ.19]: ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ತಡೆದು ಮತ ದಾನ ಮಾಡಿ ನಂತರ ಪ್ರವಾಸಕ್ಕೆ ಬರುವಂತೆ ಮನವಿ ಮಾಡಿದ್ದ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗುರುವಾರ ಮಾಗಡಿ ಹ್ಯಾಂಡ್ ಪೋಸ್ಟ್ ಮತ್ತು ಗಿರಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ನಿಂತು ಪ್ರವಾಸಿಗರ ವಾಹನಗಳನ್ನು ತಡೆದು ಮತದಾನ ಮಾಡಿ ಬಂದಿರುವ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ 200ಕ್ಕೂ ಅಧಿಕ ಸಂಖ್ಯೆಯ ಪ್ರವಾಸಿಗರು ಮತದಾನ ಮಾಡದೇ ಬಂದಿರುವುದು ಕಂಡುಬಂತು. ಅದರಲ್ಲಿ ಬೆಂಗಳೂರಿನ ಐಟಿ-ಬಿಟಿ ಉದ್ಯೋಗಿಗಳಾಗಿರುವ ಯುವಕರ ಸಂಖ್ಯೆ ಹೆಚ್ಚಿರುವುದು ಪತ್ತೆಯಾಯಿತು.

ಪರಿಶೀಲನೆಗೊಳಗಾದ ಹಲವರಿಗೆ ಇದೀಗ ನಡೆಯುತ್ತಿರುವುದು ಯಾವ ಚುನಾವಣೆ ಎಂಬುದೇ ತಿಳಿದಿರಲಿಲ್ಲ, ಇನ್ನೂ ಹಲವರಿಗೆ ಮತದಾನದ ದಿನಾಂಕವೇ ಗೊತ್ತಿಲ್ಲದಿ ರುವುದು ನೆರೆದಿದ್ದವರನ್ನು ದಂಗುಬಡಿಸಿತು. ಈ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳು ಅವರಿಗೆ ಶಾಲು ಹೊದಿಸಿ ಶಹಬ್ಬಾಸ್‌ಗಿರಿ ನೀಡಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ, ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಜೆರಾಕ್ಸ್ ಪ್ರತಿಯ ಮಾಲೆಯನ್ನು ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು.

ಮುಂದಿನ ಬಾರಿ ಮತದಾನ ಮಾಡದೇ ಆಗಮಿಸುವ ಪ್ರವಾಸಿಗರನ್ನು ವಾಪಸ್ ಕಳುಸುವ ಎಚ್ಚರಿಕೆ ನೀಡಿದರು. ಇದರಿಂದ ಪ್ರವಾಸಿಗರಿಗೆ ಅವಮಾನವಾಗಿದ್ದು, ಬಹಳಷ್ಟು ಮಂದಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದರು. ಈ ರೀತಿಯ ಕ್ರಮ ಸಾರ್ವಜನಿಕವಾಗಿ ಟೀಕೆಗೂ ಕಾರಣವಾಗಿದೆ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬ್ಯಾಲದಾಳ್ ಕುಮಾರ್, ಕಾರ್ಯದರ್ಶಿ ಜೆ. ರಾಜೇಶ್, ಪುರುಷೋತ್ತಮ್ ಇದ್ದರು.

Latest Videos
Follow Us:
Download App:
  • android
  • ios