ಬೆಂಗಳೂರು[ಮಾ.28]: ರಾಜ್ಯ ಬಿಜೆಪಿಯ ಹಾಲಿ ಸಂಸದರ ಪೈಕಿ ಟಿಕೆಟ್ ನಿರೀಕ್ಷೆಯಲ್ಲಿರುವ ಕೊಪ್ಪಳದ ಸಂಗಣ್ಣ ಕರಡಿ ಅವರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಸತತವಾಗಿ ಎಡತಾಕುತ್ತಿದ್ದಾ

ಪಕ್ಷದ 15 ಹಾಲಿ ಸಂಸದರ ಪೈಕಿ 14 ಮಂದಿಗೆ ಟಿಕೆಟ್ ಘೋಷಿಸಿರುವ ಬಿಜೆಪಿ ವರಿಷ್ಠರು ಸಂಸದರಾದ ಸಂಗಣ್ಣ ಕರಡಿ ಅವರು ಪ್ರತಿನಿಧಿಸುವ ಕೊಪ್ಪಳ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸದೆ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ಸಂಗಣ್ಣ ಅವರು ಪ್ರತಿನಿತ್ಯ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಟಿಕೆಟ್ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ, ಹೈಕಮಾಂಡ್ ಕಡೆಗೆ ಬೆರಳು ತೋರುತ್ತಿರುವ ಯಡಿಯೂರಪ್ಪ ತಾವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ ಎಂದು ಸಮಾಧಾನಪಡಿಸುತ್ತಿದ್ದಾರೆ ಎನ್ನಲಾಗಿದೆ.

ಚುನಾವಣೆ ಎದುರಿಸಲು ಸಜ್ಜಾಗಿರುವ ಸಂಗಣ್ಣ ಕರಡಿ ಅವರು ‘ಸ್ವಯಂಕೃತ ಅಪರಾಧ’ದಿಂದಾಗಿ ಇದೀಗ ಟಿಕೆಟ್‌ಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯ ರಾಜಕಾರಣಕ್ಕೆ ಮರಳುವ ಉದ್ದೇಶದಿಂದ ಸಂಗಣ್ಣ ಅವರು ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ, ಯಾವುದೇ ಸಂಸದರಿಗೂ ವಿಧಾನಸಭಾ ಟಿಕೆಟ್ ನೀಡಬಾರದು ಎಂಬ ನಿಲುವನ್ನು ಕೈಗೊಂಡ ಬಿಜೆಪಿ ವರಿಷ್ಠರು ಸಂಗಣ್ಣ ಅವರಿಗೆ ನಿರಾಕರಿಸಿದರು. ತಮಗೆ ನೀಡದಿದ್ದರೆ ತಮ್ಮ ಪುತ್ರನಿಗಾದರೂ ನೀಡಲೇಬೇಕು ಎಂಬ ಪಟ್ಟು ಹಿಡಿದರು. ಇದನ್ನು ಒಪ್ಪದ ವರಿಷ್ಠರು ಸಿ.ವಿ.ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಲು ಮುಂದಾಯಿ

ಇದರಿಂದ ಕ್ಷೇತ್ರ ಬಿಟ್ಟು ಹೋದೀತು ಎಂಬ ಕಾರಣಕ್ಕಾಗಿ ಕೆಂಡಾಮಂಡಲವಾದ ಸಂಗಣ್ಣ ಅವರು ಪಕ್ಷದ ಕಚೇರಿಯಲ್ಲಿ ಇದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನೇ ನೇರವಾಗಿ ಭೇಟಿ ಮಾಡಿ ತಮ್ಮ ಪುತ್ರನಿಗೆ ಟಿಕೆಟ್ ನೀಡದೇ ಇರುವುದನ್ನು ಏರಿದ ಧ್ವನಿಯಲ್ಲಿ ಪ್ರಶ್ನಿಸಿದ್ದರು. ಇದರಿಂದ ಅಮಿತ್ ಶಾ ಅವರು ಕೋಪಗೊಂಡರೂ ತೋರ್ಪಡಿಸಿಕೊಳ್ಳದೆ ನಂತರ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಸಂಗಣ್ಣ ಕರಡಿ ಪುತ್ರನಿಗೆ ಟಿಕೆಟ್ ಕೊಟ್ಟಿದ್ದರು ಎನ್ನಲಾಗಿದೆ.

ಆದರೆ, ಅಮಿತ್ ಶಾ ಅವರು ಅಂದಿನ ಘಟನೆಯನ್ನು ಮರೆತಿರಲಿಲ್ಲ. ಕಳೆದ ವಾರ ರಾಜ್ಯ ನಾಯಕರು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಗೆ ತೆರಳಿದಾಗ ಆ ವಿಷಯ ಪ್ರಸ್ತಾಪವಾಗಿದೆ.

ಸರದಿಯಂತೆ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಕುರಿತ ಪ್ರಸ್ತಾಪ ಬಂದಾಗ, ‘ಓಹ್..ಆ ಕರಡಿ ಸಂಗಣ್ಣ..ಮಗನಿಗೆ ಟಿಕೆಟ್ ಕೊಡಿಸುವುದಕ್ಕಾಗಿ ನನ್ನೊಂದಿಗೆ ಜಗಳವಾಡಿದ್ದರು’ ಎಂದು ವಿಧಾನಸಭಾ ಚುನಾವಣೆಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡು, ‘ಅದನ್ನು ನಂತರ ನೋಡೋಣ’ ಎಂದು ಕ್ಷೇತ್ರದ ಕುರಿತ ವರದಿಯನ್ನು ಪಕ್ಕಕ್ಕಿಟ್ಟರು. ‘ರಾಜ್ಯ ನಾಯಕರು ಆ ಘಟನೆಯನ್ನು ಮರೆತಿ ದ್ದರೂ ಅಮಿತ್ ಶಾ ಮಾತ್ರ ಮರೆತಿರಲಿಲ್ಲ’ ಎಂದು ಉನ್ನತ ಮೂಲಗಳು ತಿಳಿಸಿವೆ.

ಹಲವು ಹಂತಗಳ ಟಿಕೆಟ್ ಪಟ್ಟಿ ಬಿಡುಗಡೆ ಯಾದರೂ ಕೊಪ್ಪಳ ಕ್ಷೇತ್ರದ ಟಿಕೆಟ್ ಮಾತ್ರ ಇತ್ಯರ್ಥವಾಗಿಲ್ಲ. ಆ ಕ್ಷೇತ್ರದ ವ್ಯಾಪ್ತಿಯಲ್ಲಿನ ಪಕ್ಷದ ಶಾಸಕರು ಹಾಗೂ ಮುಖಂಡರು ಸಂಗಣ್ಣ ಅವರ ಹೆಸರನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದರೂ ಪ್ರಯೋಜನವಾಗಿಲ್ಲ. ಸಂಗಣ್ಣ ಕರಡಿ ಬದಲು ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ ಹಾಗೂ ಖ್ಯಾತ ವೈದ್ಯರೂ ಆಗಿರುವ ಡಾ.ಬಸವರಾಜ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ. ಆದರೆ, ರಾಜ್ಯ ನಾಯಕರು ಮಾತ್ರ ಒಕ್ಕೊರಲಿನಿಂದ ಸಂಗಣ್ಣ ಕರಡಿ ಅವರಿಗೇ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಸಮಸ್ಯೆ ಬಗೆಹರಿದಿಲ್ಲ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದು ತಿಳಿದು ಬಂದಿ