ನವದೆಹಲಿ(ಮೇ.02): ಯುಪಿಎ ಆಡಳಿತಾವಧಿಯಲ್ಲಿ ಒಟ್ಟು 6 ಬಾರಿ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಲಾಗಿತ್ತು. ಆದರೆ ಸೈನ್ಯ ಮತ್ತು ದೇಶದ ಭದ್ರತೆ ದೃಷ್ಟಿಯಿಂದ ಈ ದಾಳಿಗಳ ಕುರಿತು ಸಾರ್ವಜನಿಕವಾಗಿ ಮಾಹಿತಿ ನೀಡಿರಲಿಲ್ಲ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಡಾ. ಮನಮೋಹನ್ ಸಿಂಗ್, ಸರ್ಜಿಕಲ್ ದಾಳಿಗಳನ್ನು ದೇಶದ ಭದ್ರತೆ ದೃಷ್ಟಿಯಿಂದ ಅತ್ಯಂತ ಗೌಪ್ಯವಾಗಿ ಇಡಲಾಗುತ್ತದೆ. ಅಲ್ಲದೇ ಈ ದಾಳಿಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಯುಪಿ ಮತ್ತು ಹಿಂದಿನ ಎನ್ ಡಿಎ ಸರ್ಕಾರದಲ್ಲಿ ಒಟ್ಟು 8 ಸರ್ಜಿಕಲ್ ದಾಳಿಗಳಾಗಿದ್ದು, ಇವುಗಳ ಪೈಕಿ ಯುಪಿಎ ಆಡಳಿತಾವಧಿಯಲ್ಲಿ 6 ಸರ್ಜಿಕಲ್ ದಾಳಿಗಳಾಗಿದ್ದವು ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಆದರೆ ಚುನಾವಣೆಯ ಲಾಭಕ್ಕಾಗಿ ಇವುಗಳನ್ನು ಬಹಿರಂಗಪಡಿಸುವುದು ನಮ್ಮ ಜಾಯಮಾನವಲ್ಲ ಎಂದು ಸಿಂಗ್ ನುಡಿದಿದ್ದಾರೆ.

ಅದರಂತೆ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಈ ಸರ್ಜಿಕಲ್ ದಾಳಿಗಳ ಕುರಿತು ಮಾಹಿತಿ ನೀಡಿದ್ದು, ದೇಶದ ಭದ್ರತೆ ಮತ್ತು ಸೈನಿಕರ ಗೌರವ ಕಾಪಾಡುವುದು ಹೇಗೆಂದು ಕಾಂಗ್ರೆಸ್ ಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪ್ರತಿಪಾದಿಸಿರುವ ಸರ್ಜಿಕಲ್ ದಾಳಿಗಳ ಮಾಹಿತಿ:
2008ರ ಜೂನ್ 19 ರಂದು ಭತ್ತಲ್ ಸೆಕ್ಟರ್​ನಲ್ಲಿ ಸರ್ಜಿಕಲ್ ಸ್ಟ್ರೈಕ್
2011ರ ಆಗಸ್ಟ್ 30, ಸೆಪ್ಟಂಬರ್ 1 ರಂದು ಶಾರ್ದಾ ಸೆಕ್ಟರ್​ ಮೇಲೆ ದಾಳಿ
2013ರ ಜ.6 ರಂದು ಸಾವನ್ ಪಾತ್ರಾ ಚೆಕ್​ಪೋಸ್ಟ್​ನಲ್ಲಿ ಸರ್ಜಿಕಲ್ ಸ್ಟ್ರೈಕ್
2013ರ ಜುಲೈ 27-28 ರಂದು ನಜಾಪಿರ್ ಸೆಕ್ಟರ್​ನಲ್ಲಿ ಸರ್ಜಿಕಲ್ ಸ್ಟ್ರೈಕ್ 
2013ರ ಆಗಸ್ಟ್ 6ರಂದು ನೀಲಂ ಕಣಿವೆಯಲ್ಲಿ ಸರ್ಜಿಕಲ್ ಸ್ಟ್ರೈಕ್
2014ರ ಜನವರಿ 14 ರಂದು UPA ಅವಧಿಯ 6ನೇ ಸರ್ಜಿಕಲ್ ಸ್ಟ್ರೈಕ್

ಅಟಲ್ ಸರ್ಕಾರದಲ್ಲಿ ನಡೆದಿದ್ದ ಸರ್ಜಿಕಲ್ ದಾಳಿಗಳು:
2000ನೇ ಜನವರಿ 21 ರಂದು ನೀಲಂ ನದಿಯ ಬಳಿ ಸರ್ಜಿಕಲ್ ಸ್ಟ್ರೈಕ್
2003ರ ಸೆಪ್ಟಂಬರ್ 18 ರಂದು ಬಾರೋಹ್ ಸೆಕ್ಟರ್​ನಲ್ಲಿ ಸರ್ಜಿಕಲ್ ಸ್ಟ್ರೈಕ್

ಹೀಗೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲೂ ಹಲವು ಸರ್ಜಿಕಲ್ ಸ್ಟ್ರೈಕ್ ದಾಳಿಗಳು ನಡೆದಿದ್ದು, ಒಂದು ಜವಾಬ್ದಾರಿಯುತ ಸರ್ಕಾರವಾಗಿ ಈ ದಾಳಿಗಳ ಮಾಹಿತಿ ಗೌಪ್ಯವಾಗಿ ಇಡಲಾಗಿತ್ತು ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ