ಲಖನೌ[ಮೇ.05]: ಪ್ರಸಕ್ತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೇರಿಸುವ ಹೊಣೆ ಹೊತ್ತುಕೊಂಡಿರುವ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿಗೆ, ಸ್ವತಃ ತಾವೇ ಗೆಲ್ಲುವ ಭಯ ಕಾಡಿದೆಯೇ? ಉತ್ತರಪ್ರದೇಶದ ಅಮೇಠಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಕೈಗೊಂಡಿರುವ ಪ್ರಚಾರದ ಭರಾಟೆ ಇಂಥದ್ದೊಂದು ಅನುಮಾನಗಳನ್ನು ಹುಟ್ಟುಹಾಕಿದೆ. ಯಾವುದೇ ಕಾರಣಕ್ಕೂ ತಮ್ಮ ಕುಟುಂಬದ ಕರ್ಮಭೂಮಿಯಾಗಿರುವ ಕ್ಷೇತ್ರದಲ್ಲಿ ಸೋಲಲೇಬಾರದು ಎಂದು ಪಣತೊಟ್ಟಿರುವ ರಾಹುಲ್‌ ಇದೇ ಕಾರಣಕ್ಕಾಗಿ, ಮೊದಲ ಬಾರಿಗೆ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ, ಕ್ಷೇತ್ರದ ಹೊರಗಿನ ವ್ಯಕ್ತಿಗಳನ್ನು ಕರೆತಂದು ಪ್ರಚಾರ ನಡೆಸಿದ್ದಾರೆ.

ರಾಹುಲ್‌ ಪ್ರತಿನಿಧಿಸುವ ಅಮೇಠಿ ಮತ್ತು ಸೋನಿಯಾ ಪ್ರತಿನಿಧಿಸುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾಗಿ ಉಳಿದ ಖ್ಯಾತನಾಮ ನಾಯಕರು ಪ್ರಚಾರ ಮಾಡಿದ ಉದಾಹರಣೆಯೇ ಇಲ್ಲ. ಅಷ್ಟರ ಮಟ್ಟಿಗೆ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಹಲವು ದಶಕಗಳಿಂದ ಇದೆ.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ರಾಹುಲ್‌ ವಿರುದ್ಧ ಕೇವಲ 1 ಲಕ್ಷ ಮತದ ಆಸುಪಾಸಿಂದ ಸೋತಿದ್ದರು. ಇನ್ನು ಈ ಬಾರಿ ಹೇಗಾದರೂ ಮಾಡಿ ರಾಹುಲ್‌ಗೆ ಸೋಲಿನ ರುಚಿ ತೋರಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ಮತ್ತು ಸಂಘ ಪರಿವಾರ, ಈ ಕ್ಷೇತ್ರಕ್ಕೆಂದೇ ವಿಶೇಷ ಕಾರ್ಯಯೋಜನೆ ರೂಪಿಸಿ ಅದನ್ನು ಜಾರಿಗೊಳಿಸುತ್ತಿವೆ.

ಇದು ರಾಹುಲ್‌ ಮತ್ತು ಕಾಂಗ್ರೆಸ್‌ ನಾಯಕರನ್ನು ಗಂಭೀರ ಆತಂಕಕ್ಕೆ ದೂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿಯೇ ಕಳೆದ 15 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಸೇರದ ಕಾರ್ಯಕರ್ತರನ್ನು ಕರೆಸಿ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಪ್ರಚಾರ ಮಾಡಿಸಲಾಗುತ್ತಿದೆ.

ಇತ್ತೀಚೆಗಷ್ಟೇ ಎಡಪಕ್ಷಗಳ ಯುವಘಟಕದ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ ಕಾಂಗ್ರೆಸ್‌ ಸೇರಿದ 100ಕ್ಕೂ ಹೆಚ್ಚು ಜನರನ್ನು ಅಮೇಠಿ ಮತ್ತು ರಾಯ್‌ಬರೇಲಿಯ ಗ್ರಾಮಗ್ರಾಮಗಳಿಗೂ ಕಳುಹಿಸಿ ಪ್ರಚಾರ ನಡೆಸಲಾಗುತ್ತಿದೆ.

ಮತ್ತೊಂದೆಡೆ ಕಾಂಗ್ರೆಸ್‌ನ ಮಾಜಿ ಸಂಸದ ಅರುಣ್‌ ನೆಹರೂ ಅವರ ಪುತ್ರಿ ಅವಂತಿಕಾರನ್ನು ಇದೇ ಮೊದಲ ಬಾರಿಗೆ ರಾಯ್‌ಬರೇಲಿಗೆ ಪ್ರಚಾರಕ್ಕೆ ಕರೆ ತಂದಿರುವುದು ಕೂಡಾ ಇದೇ ಕಾರಣಕ್ಕಾಗಿ ಎನ್ನಲಾಗಿದೆ.