Asianet Suvarna News Asianet Suvarna News

18ಕ್ಕೆ ಬಿಜೆಪಿ ಮೊದಲ ಪಟ್ಟಿ : 20 ಮಂದಿಗೆ ಟಿಕೆಟ್

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಘೋಷಣೆಗೆ ಸಿದ್ಧವಾಗಿವೆ. ಇನ್ನು ಬಿಜೆಪಿ ಕೂಡ ತಮ್ಮ ಮೊದಲ ಪಟ್ಟಿಯನ್ನು ಮಾರ್ಚ್ 18 ರಂದು ಬಿಡುಗಡೆ ಮಾಡಲಾಗುವುದು ಎಂದು ಮುಖಂಡರು ಹೇಳಿದ್ದಾರೆ. 

First list of BJP candidates to be released on March 18
Author
Bengaluru, First Published Mar 14, 2019, 8:09 AM IST

ಬೆಂಗಳೂರು :  ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಈ ತಿಂಗಳ 18ರಂದು ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಮೊದಲ ಹಂತದಲ್ಲಿ ಹಾಲಿ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳೂ ಸೇರಿದಂತೆ ಸುಮಾರು 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈ ವಿಷಯ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ 15ರಂದು (ಶುಕ್ರವಾರ) ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಸುದೀರ್ಘ ಚರ್ಚೆ ನಡೆಸಿದ ನಂತರ ಮರುದಿನ 16ರಂದು ನಾವೆಲ್ಲರೂ ದೆಹಲಿಗೆ ತೆರಳುತ್ತೇವೆ. ಅಲ್ಲಿ ವರಿಷ್ಠರೊಂದಿಗೆ ಅಂತಿಮ ಹಂತದ ಸಮಾಲೋಚನೆ ನಡೆಯಲಿದೆ ಎಂದರು.

ಬಹುತೇಕ 18ರಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 20 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಪಕ್ಷದ ರಾಷ್ಟ್ರೀಯ ಚುನಾವಣಾ ಸಮಿತಿಯಿಂದ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು, ರಾಜ್ಯದ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ವೈಫಲ್ಯಗಳು ಹಾಗೂ ಹಿಂದಿನ ಬಿಜೆಪಿ ಆಡಳಿತದ ಜನಪರ ಯೋಜನೆಗಳು. ಈ ಮೂರು ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುವುದು ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಪಾರದರ್ಶಕ ಮತ್ತು ಅಭಿವೃದ್ಧಿ ಪರ ಆಡಳಿತವೇ ನಮಗೆ ಶ್ರೀರಕ್ಷೆಯಾಗಲಿದೆ. ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಕೇಂದ್ರ ಸಚಿವರ ಮೇಲೆ ಆರೋಪಗಳು ಕೇಳಿ ಬಂದಿಲ್ಲ. ಭಾರತ ಅಭಿವೃದ್ಧಿ ವಿಷಯದಲ್ಲಿ ಪ್ರಬಲ ರಾಷ್ಟ್ರಗಳಿಗೆ ಸಮನಾಗಿ ದಾಪುಗಾಲು ಹಾಕುತ್ತಿದೆ. ಮೋದಿ ಅವರು ಭಾರತ ವರ್ಚಸ್ಸನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅವರ ನಾಯಕತ್ವ ಇಡಿ ವಿಶ್ವಕ್ಕೆ ಮಾದರಿಯಾಗಿದ್ದು, ಅನೇಕ ರಾಷ್ಟ್ರಗಳು ಪ್ರಶಂಸೆ ವ್ಯಕ್ತಪಡಿಸಿವೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವ ಪ್ರಮುಖ ಭರವಸೆಯೊಂದಿಗೆ ಕಳೆದ ಒಂಭತ್ತು ತಿಂಗಳ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಇದುವರೆಗೆ ಸಾಲಮನ್ನಾಕ್ಕಾಗಿ ವೆಚ್ಚ ಮಾಡಿದ್ದು 4,500 ಕೋಟಿ ರು. ಮಾತ್ರ. ಅವರು ರೈತರ ಬೆಳೆ ಸಾಲ ಮನ್ನಾ ಬಗ್ಗೆ ಭರವಸೆ ನೀಡದೇ ಇದ್ದಿದ್ದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನೂ ಗೆಲ್ಲುವುದು ಕಷ್ಟವಾಗುತ್ತಿತ್ತು. ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದಿರುವ ಅವರಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹರಿಹಾಯ್ದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದರ ಬಗ್ಗೆ ನಾವು ತಲೆಯನ್ನೇ ಕೆಡಿಸಿಕೊಂಡಿಲ್ಲ. ಅದರಿಂದ ನಮಗೆ ಅನುಕೂಲವೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಆರ್‌.ಅಶೋಕ್‌, ಗೋವಿಂದ ಕಾರಜೋಳ, ಅರವಿಂದ್‌ ಲಿಂಬಾವಳಿ, ರಾಜೀವ್‌ ಚಂದ್ರಶೇಖರ್‌, ಶಿವನಗೌಡ ನಾಯಕ್‌, ಎಸ್‌.ಸುರೇಶ್‌ಕುಮಾರ್‌, ವೀರಣ್ಣ ಚರಂತಿಮಠ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ರವಿ ಸುಬ್ರಮಣ್ಯ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉದಯ್‌ ಗರುಡಾಚಾರ್‌, ಪ್ರೀತಂ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌

ಬಿಜೆಪಿಯ ರಾಜ್ಯದಲ್ಲಿನ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ಸಿಗುವುದು ಬಹುತೇಕ ನಿಶ್ಚಿತವಾಗಿದೆ. ಪಕ್ಷದ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಹಾಲಿ ಸಂಸದರನ್ನು ಬದಲಾಯಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಎಲ್ಲರಿಗೂ ಟಿಕೆಟ್‌ ಸಿಗಲಿದೆ. ಅವರೆಲ್ಲರೂ ಮತ್ತೊಮ್ಮೆ ಗೆದ್ದು ಬರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಹಾಗಠಬಂಧನ್‌ಗೆ ತಕ್ಕ ಪಾಠ: ಆರ್‌ಸಿ

ಈ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಹಲವು ಪಕ್ಷಗಳು ಕೂಡಿ ರಚಿಸಿಕೊಂಡಿರುವ ಮಹಾಗಠಬಂಧನ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಮಹಾಗಠಬಂಧನ್‌ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿನ ಸರ್ಕಾರವೇ ಉತ್ತಮ ಉದಾಹರಣೆ. ಅವಕಾಶವಾದಿ ಪಕ್ಷಗಳು ಅಧಿಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದುಗೂಡಿವೆ. ಆದರೆ, ಯಾವುದೇ ಸಿದ್ಧಾಂತವಿಲ್ಲದ ಈ ಮಹಾಗಠಬಂಧನವನ್ನು ದೇಶದ ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು.

ಯುಪಿಎ ಸರ್ಕಾರದಲ್ಲಿನ 10 ವರ್ಷಗಳ ಭ್ರಷ್ಟಾಚಾರದ ಆಡಳಿತ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಐದು ವರ್ಷಗಳ ಸಾಧನೆ ಮತ್ತು ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ದಿಟ್ಟಕ್ರಮಗಳ ಬಗ್ಗೆ ಚುನಾವಣೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios