ಮಂಡ್ಯ: ಜೆಡಿಎಸ್ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಚಿತ್ರನಟರಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ವಿರುದ್ಧ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಡಿ ಪ್ರಕರಣ ದಾಖಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಚಿತ್ರನಟಿ ಸುಮಲತಾ ಅಂಬರೀಷ್ ಪರವಾಗಿ ಚಿತ್ರನಟರಾದ ದರ್ಶನ್, ಯಶ್, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. 

ಈ ಬಗ್ಗೆ ಕೆ.ಆರ್.ಪೇಟೆ ಶಾಸಕ  ನಾರಾಯಣಗೌಡ ಅವರು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವ ವೇಳೆ ಸಿನಿಮಾ ನಟರು ಗೌರವದಿಂದ ಇರಬೇಕು. ಈಗ ನಮ್ಮದೇ ಸರ್ಕಾರ ಇದೆ. ಜೆಡಿಎಸ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪ್ರಚಾರ ನಡೆಸಿದರೆ ನಿಮ್ಮ ಆಸ್ತಿ ಬಗ್ಗೆ ತನಿಖೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. 

ಈ ಬಗ್ಗೆ ಚುನಾವಣಾಧಿಕಾರಿ ರವಿ ಕುಮಾರ್ ಅವರು ದೂರು ನೀಡಿದ್ದು ಕೆ. ಆರ್.ಪೇಟೆ. ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1890, 171ಎಫ್ ಅಡಿ ಪ್ರಕರಣ ದಾಖಲಾಗಿದೆ.