ನವದೆಹಲಿ(ಮೇ.29): ನಾಳೆ(ಮೇ.30) ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ದೇಶದ 17ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಅದರಂತೆ ಮೋದಿ ಪ್ರಮಾಣವಚನಕ್ಕೆ ಅತಿಥಿಗಳ ಪಟ್ಟಿ ತಯಾರಿಸುವಲ್ಲಿ ಬಿಜೆಪಿ ನಿರತವಾಗಿದ್ದು, ದೇಶದ ಮೂಲೆ ಮೂಲೆಗಳಿಂದ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ. ಮೋದಿ ಪ್ರಮಾಣವಚನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಸೇರಿದಂತೆ ದೇಶ-ವಿದೇಶಗಳ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ.

ಈ ಮಧ್ಯೆ ಮೋದಿ ಪ್ರಮಾಣವಚನಕ್ಕೆ ಪ.ಬಂಗಾಳದಲ್ಲಿ ನಡೆದ ವಿವಿಧ ಹಿಂಸಾಚಾರ ಪ್ರಕರಣಗಳಲ್ಲಿ ಮೃತಪಟ್ಟ ಸುಮಾರು 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಸ್ಥರನ್ನೂ ಆಹ್ವಾನಿಸಲಾಗಿದೆ.

ಟಿಎಂಸಿ ಕಾರ್ಯಕರ್ತರೊಂದಿಗೆ ನಡೆದ ಘರ್ಷಣೆಯಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಸ್ಥರನ್ನು ವಿಶೇಷ ಅತಿಥಿಗಳ ಪಟ್ಟಿಯಲ್ಲಿ ಸೇರಿಸಿರುವುದು ವಿಶೇಷ.

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಮೋದಿ ಪ್ರಮಾಣವಚನಕ್ಕೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಬರಲಿರುವುದು ಕುತೂಹಲ ಹೆಚ್ಚಿಸಿದೆ.