Asianet Suvarna News Asianet Suvarna News

ಕೈ - ಜೆಡಿಎಸ್ ಅತೃಪ್ತರಿಗೆ ಬಿಜೆಪಿ ಪರ ಒಲವು ? ರಾಜ್ಯ ಸರ್ಕಾರಕ್ಕೆ ಕಂಟಕ?

ದೇಶದಲ್ಲಿ ಲೋಕಸಭಾ ಚುನಾವಣೆ ಮಹಾ ಸಮರ ಮುಕ್ತಾಯವಾಗಿದೆ. ಈಗಾಗಲೇ ಹಲವು ಎಕ್ಸಿಟ್ ಪೋಲ್ ಸರ್ವೆಗಳು ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ. 

Exit Poll Survey BJP Win With Majority In India
Author
Bengaluru, First Published May 20, 2019, 7:33 AM IST

ಬೆಂಗಳೂರು :  ವಿವಿಧ ಖಾಸಗಿ ಸುದ್ದಿವಾಹಿನಿಗಳು ಹಾಗೂ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲೂ ಬಿರುಸಿನ ಚರ್ಚೆ ಆರಂಭಗೊಂಡಿದೆ.

ಒಟ್ಟಾರೆ ಸಮೀಕ್ಷೆಯಲ್ಲಿ ಬಿಜೆಪಿಯೇ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಅಂಕಿಅಂಶ ಪ್ರಕಟಗೊಂಡಿದೆ. ಸಮೀಕ್ಷೆ ಅನುಸಾರ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎಷ್ಟೆಲ್ಲ ಪ್ರಯತ್ನಪಟ್ಟರೂ ಹೆಚ್ಚು ಸ್ಥಾನ ಗಳಿಸುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಈ ಸಮೀಕ್ಷೆಯೇ ನಿಜವಾದಲ್ಲಿ ರಾಜ್ಯ ಸರ್ಕಾರದ ಅಸ್ತಿತ್ವವೂ ಅಲುಗಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಶಾಸಕರು ಈ ಫಲಿತಾಂಶವನ್ನು ಕುತೂಹಲದಿಂದಲೇ ಕಾದು ನೋಡುತ್ತಿದ್ದಾರೆ. ಇದರೊಂದಿಗೆ ತಮ್ಮ ರಾಜಕೀಯ ಭವಿಷ್ಯವನ್ನೂ ಕಾಣುವ ತವಕದಲ್ಲಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಗೂ ಮೊದಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್‌ ಶಾಸಕರೆಲ್ಲರೂ ನಂತರ ಸುಮ್ಮನಾಗಿದ್ದರು. ಚುನಾವಣೆ ಮುಗಿದು ಫಲಿತಾಂಶ ಹೊರಬೀಳಲಿ ಎಂದೇ ಕಾಯತೊಡಗಿದ್ದರು. ಈಗ ಸಮೀಕ್ಷೆ ಪ್ರಕಟವಾಗಿವೆ. ಆ ಎಲ್ಲ ಅತೃಪ್ತ ಶಾಸಕರು ಮತ್ತೆ ತಮ್ಮ ಧ್ವನಿ ಎತ್ತರಿಸಲು ಪ್ರಯತ್ನಪಡುವ ಸಂಭವವಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಕಡಿಮೆ ಸ್ಥಾನಗಳು ಲಭಿಸಿ ಮುಖಭಂಗವಾದಲ್ಲಿ ಅತೃಪ್ತ ಶಾಸಕರು ತಮ್ಮ ಪಕ್ಷಗಳ ವಿರುದ್ಧ ಬಂಡಾಯ ಸಾರಲು ಬಲ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಬಿಜೆಪಿ ಎರಡಂಕಿ ದಾಟುವುದೂ ಕಷ್ಟಎಂಬ ಮಾತನ್ನು ಮಿತ್ರ ಪಕ್ಷಗಳು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು, ಸವಾಲಿನ ರೀತಿಯಲ್ಲಿ ಹೇಳಿಕೊಂಡು ಬಂದಿದ್ದರು. ಜೊತೆಗೆ ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಮೈತ್ರಿಕೂಟ 16ರಿಂದ 18 ಸ್ಥಾನಗಳನ್ನು ಗಳಿಸುತ್ತದೆ ಎಂದಿದ್ದರು. ಆದರೆ, ಇದೀಗ ಹೊರಬಿದ್ದಿರುವ ಸಮೀಕ್ಷೆಯ ಅಂಕಿ ಅಂಶಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿವೆ.

ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಯೇ ಮೊದಲ ಸ್ಥಾನದಲ್ಲಿದೆ. ಮಿತ್ರ ಪಕ್ಷಗಳ ಸಂಖ್ಯಾಬಲ ಅವರ ನಿರೀಕ್ಷೆಯಂತೆ ಹೆಚ್ಚುವ ಸಾಧ್ಯತೆ ಕಂಡುಬರುತ್ತಿಲ್ಲ. ಇದು ಉಭಯ ಪಕ್ಷಗಳ ನಾಯಕರ ಚಿಂತೆಗೆ ಕಾರಣವಾಗಿದೆ. ಆದರೂ ಈಗಲೇ ಸೋಲು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಆ ನಾಯಕರು ಫಲಿತಾಂಶ ಪ್ರಕಟಗೊಳ್ಳಲಿ, ಆಗ ಸತ್ಯಾಸತ್ಯ ಗೊತ್ತಾಗುತ್ತದೆ ಎಂಬ ವಿಶ್ವಾಸದ ಮಾತುಗಳನ್ನು ಕಷ್ಟಪಟ್ಟು ಆಡುತ್ತಿದ್ದಾರೆ. ಆದರೆ, ಬಿಜೆಪಿ ಪಾಳೆಯದಲ್ಲಿ ಈ ಸಮೀಕ್ಷೆ ಸಂತಸದ ಹೊನಲನ್ನೇ ಹರಿಸಿದೆ. ಬಿಜೆಪಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂಬ ಮಾತನ್ನು ನಾನು ಮುಂಚಿನಿಂದಲೂ ಹೇಳುತ್ತಿದ್ದೆ. ಅದನ್ನು ಸಮೀಕ್ಷೆಗಳು ದೃಢೀಕರಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿಕೆಯನ್ನೂ ನೀಡಿದ್ದಾರೆ.

ಮೇ 23ರ ನಂತರ ರಾಜ್ಯದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಮಾತನ್ನು ಬಿಜೆಪಿ ನಾಯಕರು ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭವಾದ ದಿನದಿಂದಲೂ ಹೇಳಿಕೊಂಡು ಬಂದಿದ್ದಾರೆ. ಸಮೀಕ್ಷೆ ಪ್ರಕಟಗೊಂಡ ಬಳಿಕ ಸರ್ಕಾರ ಪತನಗೊಳ್ಳುವುದು ನಿಶ್ಚಿತ. ಕಾದು ನೋಡಿ ಎಂಬ ಮಾತನ್ನು ಬಿಜೆಪಿ ನಾಯಕರು ಆಂತರಿಕವಾಗಿ ಹೇಳುತ್ತಿದ್ದಾರೆ.

ಮೇಲಾಗಿ ಈಗಾಗಲೇ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ಜಟಾಪಟಿ ನಡೆದಿದೆ. ಈ ಜಟಾಪಟಿ ದೆಹಲಿಯ ಅಂಗಳವನ್ನೂ ತಲುಪಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ರಾಜ್ಯ ನಾಯಕರಿಗೆ ತಾಕೀತು ಮಾಡುವ ಹಂತಕ್ಕೆ ಬಂದು ನಿಂತಿದೆ. ಇದೇನಿದ್ದರೂ ಬೂದಿ ಮುಚ್ಚಿದ ಕೆಂಡದಂತಿದ್ದು, ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಸ್ಫೋಟಗೊಳ್ಳುತ್ತದೆ ಎಂಬ ಮಾತು ಸಮೀಕ್ಷೆಯ ನಂತರ ಬಲವಾಗಿ ಕೇಳಿಬರತೊಡಗಿದೆ.

‘ಬೇಲಿ ಮೇಲೆ ಕುಳಿತಿರುವ’ ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ಇದೀಗ ಸುಲಭವಾಗಿ ಹೊರಬಂದು ಬಿಜೆಪಿಯನ್ನು ಬೆಂಬಲಿಸಬಹುದು. ಆಗ ಈಗಿರುವ ಸಮ್ಮಿಶ್ರ ಸರ್ಕಾರ ಪತನಗೊಂಡು ತಮ್ಮ ಪಕ್ಷದ ಸರ್ಕಾರ ಅಧಿಕಾರದ ಗದ್ದುಗೆ ಏರಲಿದೆ ಎಂಬ ವಿಶ್ವಾಸ ಮಾತುಗಳು ಬಿಜೆಪಿ ಪಾಳೆಯದಿಂದ ಮತ್ತಷ್ಟುಗಟ್ಟಿಯಾಗಿ ಹೊರಬರಲು ಈ ಸಮೀಕ್ಷೆಗಳು ನೆರವಾಗಿವೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios