ಅಸಮಾಧಾನದ ಹೊಗೆಯಲ್ಲಿ ಶಾಸಕ ವಿ.ಸೋಮಣ್ಣ ಕಟ್ಟ ಬೆಂಬಲಿಗ, ಮಾಜಿ ಬಿಬಿಎಂಪಿ ಮಾಜಿ ಉಪಮೇಯರ್ ಬಿಜೆಪಿ  ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದ್ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತಷ್ಟು ಹೊಡೆತ ಬಿದ್ದಿದೆ.

ಬೆಂಗಳೂರು, [ಏ.08]:  ಬಿಬಿಎಂಪಿ ಮಾಜಿ ಉಪಮೇಯರ್ ಲಕ್ಷ್ಮಿನಾರಾಯಣ್ ಅವರು ಇಂದು [ಸೋಮವಾರ] ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ತಮ್ಮ ನೂರಾರು ಕಾರ್ಯಕರ್ತರ ಜೊತೆ ಲಕ್ಷ್ಮಿನಾರಾಯಣ್ ಅವರು ಇಂದು [ಸೋಮವಾರ] ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಕಾಂಗ್ರೆಸ್​ ಸೇರಿದರು.

ಬಳಿಕ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ಪಕ್ಷ ಹೊಸದೇನಲ್ಲ. ಈ ಹಿಂದೆ ನಾನು ಇಲ್ಲೇ ಇದ್ದೆ. ಆದ್ರೀಗ, ಬಿಜೆಪಿಯ ನೀತಿಗೆ ಬೇಸತ್ತು ನಾನು ಮರಳಿ ಗೂಡಿಗೆ ಅನ್ನುವಂತೆ ಮತ್ತೆ ಕಾಂಗ್ರೆಸ್​ಗೆ ಬಂದಿದ್ದೇನೆ. ಬಿ.ಕೆ ಹರಿಪ್ರಸಾದ್ ಅವರ ಋಣ ತೀರಿಸಲು ನಾನು ಕಾಂಗ್ರೆಸ್​ಗೆ ಬಂದಿದ್ದೇನೆಯೇ ಹೊರತು ಯಾವುದೇ ಷರತ್ತು ಇಟ್ಟು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಈ ಹಿಂದೆ ಯಾರನ್ನ ನಂಬಿ ಬಿಜೆಪಿಗೆ ಹೋಗಿದ್ದೆ, ನನಗೆ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಬಗ್ಗೆ ಈಗ ಯಾಕೆ ಮಾತನಾಡಲಿ ಎಂದು ಪರೋಕ್ಷವಾಗಿ ಮಾಜಿ ಸಚಿವ ಸೋಮಣ್ಣ ವಿರುದ್ಧ ಕಿಡಿಕಾರಿದರು.

Scroll to load tweet…

ಏಪ್ರಿಲ್ 18ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಯುವಕ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗಿದ್ರೆ, ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಕೆ.ಹರಿಪ್ರಸಾದ್ ಅವರು ಕಣದಲ್ಲಿದ್ದಾರೆ.

ಮೊದಲಿಗೆ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಟಿಕೆಟ್ ಎನ್ನಲಾಗಿತ್ತು. ಆದ್ರೆ ಕೊನೆಗಳಿಗೆಯಲ್ಲಿ ತೇಜಸ್ವಿ ಸೂರ್ಯಗೆ ಮಣೆ ಹಾಕಿರುವುದು ಹಲವು ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ನಗರ ಪ್ರಮುಖ ಲೀಡರ್ ಪಕ್ಷದ ತೊರೆದಿರುವುದು ಬಿಜೆಪಿ ಮತ್ತಷ್ಟು ಹೊಡೆತ ಬಿದ್ದಿದೆ.