ಬೆಂಗಳೂರು[ಏ.20]: ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡಕ್ಕೆ ಧುಮುಕಿದ್ದ 241 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರದಲ್ಲಿ ಸುಭದ್ರವಾಗಿ ಸೇರಿದ್ದು, ಪೊಲೀಸ್‌ ಬಿಗಿ ಭದ್ರತೆಯಲ್ಲಿ ಆಯಾ ಜಿಲ್ಲೆಯಲ್ಲಿನ ಸ್ಟ್ರಾಂಗ್‌ ರೂಮ್‌ನಲ್ಲಿರಿಸಲಾಗಿದೆ.

ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಸಂಜೆ 6ಗಂಟೆಗೆ ಮತದಾನ ಮುಕ್ತಾಯದ ಬಳಿಕ ಸ್ಟ್ರಾಂಗ್‌ ರೂಮ್‌ಗೆ ಸ್ಥಳಾಂತರಿಸಲಾಗಿದೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಲ್ಲಿವರೆಗೆ ಮತಪಟ್ಟೆಯಲ್ಲಿ ಅಭ್ಯರ್ಥಿಗಳ ಹಣೆಬರಹ ಭದ್ರವಾಗಿರಲಿದೆ. ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ಸುರಕ್ಷಿತವಾಗಿಡಲಾಗಿದೆ. ಸಿಆರ್‌ಪಿಎಫ್‌ ಸೇರಿದಂತೆ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎರಡು ಹಂತದಲ್ಲಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೇ, ಸ್ಟ್ರಾಂಗ್‌ ರೂಮ್‌ಗಳ ಒಳಗೆ ಮತ್ತು ಹೊರ ಭಾಗದಲ್ಲಿ ಸಿಸಿಟಿವಿಗಳ ಕಣ್ಗಾವಲು ಹಾಕಲಾಗಿದೆ. ಕ್ಷಣಕ್ಷಣಕ್ಕೂ ಅದನ್ನು ಪರಿಶೀಲನೆ ನಡೆಸಲಾಗುತ್ತದೆ.

ಮತದಾನ ಮುಕ್ತಾಯದ ಬಳಿಕ ಅಂತಿಮ ಕೆಲಸಗಳನ್ನು ಪೂರ್ತಿಗೊಳಿಸಿ ಗುರುವಾರ ತಡರಾತ್ರಿಯ ಹೊತ್ತಿಗೆ ಮತಪೆಟ್ಟಿಗೆಗಳನ್ನು ಸ್ಟ್ರಾಂಗ್‌ ರೂಮ್‌ಗೆ ಚುನಾವಣಾ ಸಿಬ್ಬಂದಿ ತಂದು ಜೋಡಿಸಿದ್ದಾರೆ. ಬಳಿಕ ಸೂಕ್ತ ಭದ್ರತೆವಹಿಸಲಾಯಿತು. ಶುಕ್ರವಾರ ಬೆಳಗ್ಗೆ ಆಯಾ ಜಿಲ್ಲೆಗಳಲ್ಲಿ ಸಂಬಂಧಪಟ್ಟಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಠಡಿಗಳಿಗೆ ಮುದ್ರೆ ಹಾಕಿಸಿದ್ದಾರೆ. ಮುಂದಿನ ಒಂದುತಿಂಗಳ ಕಾಲ ಪೊಲೀಸ್‌ ಭದ್ರತೆಯಲ್ಲಿ ಮತಪೆಟ್ಟಿಗೆಗಳು ಸ್ಟ್ರಾಂಗ್‌ ರೂಮ್‌ನಲ್ಲಿ ಇರಲಿವೆ. ಬಾಗಿಲು, ಕಿಟಕಿಗಳನ್ನು ತೆಗೆಯದಂತೆ ಕೊಠಡಿಯನ್ನು ಭದ್ರಗೊಳಿಸಲಾಗಿದೆ.

ದಿನದ 24 ಗಂಟೆಯೂ ಸ್ಟ್ರಾಂಗ್‌ ರೂಮ್‌ಗಳನ್ನು ಕಾಯಲಾಗುತ್ತದೆ. ಯಾವುದೇ ಸ್ಟ್ರಾಂಗ್‌ ರೂಮ್‌ಗಳ ಅಕ್ಕ-ಪಕ್ಕ ಯಾರು ಸುಳಿಯದಂತೆ ಚುನಾವಣಾ ಆಯೋಗವು ಸೂಕ್ತ ಕ್ರಮ ಜರುಗಿಸಲಾಗಿದೆ. ಪೊಲೀಸ್‌ ಸಿಬ್ಬಂದಿಯ ಜತೆಗೆ ಆಯೋಗದ ಸಿಬ್ಬಂದಿಯೂ ಸಹ ಎಚ್ಚರಿಕೆ ವಹಿಸಿದ್ದು, ಆಗಾಗ್ಗೆ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.

ಮತ ಎಣಿಕೆ ಕೇಂದ್ರಗಳು

ಮತದಾನ ನಡೆದಿರುವ 14 ಲೋಕಸಭಾ ಕ್ಷೇತ್ರಗಳ ಮತ ಎಣಿಕೆಯು ಮೇ 23 ನಡೆಯಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಯ ವಿವರ ಇಂತಿದೆ

ಉಡುಪಿ-ಚಿಕ್ಕಮಗಳೂರು: ಸೆಂಟ್‌ ಸಿಸಿಲಿ ಹೈಸ್ಕೂಲ್‌, ಉಡುಪಿ

ಹಾಸನ - ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು: ಡೈರಿ ವೃತ್ತ, ಹಾಸನ

ದಕ್ಷಿಣ ಕನ್ನಡ: ಎನ್‌ಐಟಿಕೆ ಕಾಲೇಜು, ಸುರತ್ಕಲ್‌

ಚಿತ್ರದುರ್ಗ: ಸರ್ಕಾರಿ ವಿಜ್ಞಾನಕಾಲೇಜು (ಹೊಸಕಟ್ಟಡ), ಚಿತ್ರದುರ್ಗ

ತುಮಕೂರು: ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ತುಮಕೂರು ವಿವಿ ವಿಜ್ಞಾನ ಕಾಲೇಜು

ಮಂಡ್ಯ: ಸರ್ಕಾರಿ ಕಾಲೇಜು, ಬಿ.ಎಂ.ರಸ್ತೆ, ಮಂಡ್ಯ

ಮೈಸೂರು-ಕೊಡಗು: ಸರ್ಕಾರಿ ಮಹಾರಾಣಿ ಕಾಲೇಜು, ಮೈಸೂರು

ಚಾಮರಾಜನಗರ: ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಚಾ.ನಗರ

ಬೆಂಗಳೂರು ಗ್ರಾ.: ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ರಾಮನಗರ

ಬೆಂಗಳೂರು ಉತ್ತರ: ಸೆಂಟ್‌ ಜೋಸೆಫ್‌ ಇಂಡಿಯನ್‌ ಸ್ಕೂಲ್‌, ವಿಠ್ಠಲ್‌ ಮಲ್ಯ ರಸ್ತೆ, ಬೆಂಗಳೂರು

ಬೆಂಗಳೂರು ಕೇಂದ್ರ: ಮೌಂಟ್‌ ಕಾರ್ಮಲ್‌ ಕಾಲೇಜು, ವಸಂತನಗರ, ಬೆಂಗಳೂರು

ಬೆಂಗಳೂರು ದಕ್ಷಿಣ: ಎಸ್‌ಎಸ್‌ಎಂಆರ್‌ವಿ ಪಿಯುಸಿ ಕಾಲೇಜು, ಜಯನಗರ, ಬೆಂಗಳೂರು

ಚಿಕ್ಕಬಳ್ಳಾಪುರ: ನಾಗಾರ್ಜುನ ಎಂಜಿನಿಯರಿಂಗ್‌ ಕಾಲೇಜು, ದೇವನಹಳ್ಳಿ

ಕೋಲಾರ: ಸರ್ಕಾರಿ ಬಾಲಕರ ಪದವಿ ಕಾಲೇಜು, ಕೋಲಾರ