ಹುಬ್ಬಳ್ಳಿ: ಕಲಬುರಗಿ, ಮಂಡ್ಯ ಹಾಗೂ ತುಮಕೂರಲ್ಲಿ ಮತದಾನದ ಬಳಿಕ ಇವಿಎಂ ಮಷಿನ್‌ ಬದಲಾಗುವ ಸಾಧ್ಯತೆ ಇದೆ. ಅದರಲ್ಲೂ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚುವರಿಯಾಗಿ ನೀಡಲಾದ ಇವಿಎಂ ಮಷಿನ್‌ಗಳನ್ನು ದುರ್ಬಳಕೆ ಮಾಡಬಹುದು ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಶಂಕಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ವ್ಯವಸ್ಥೆಯ ಬಗೆಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಮತದಾನದ ಬಳಿಕ ಸ್ಟ್ರಾಂಗ್‌ ರೂಂನಲ್ಲಿ ಇಡಲಾದ ಇವಿಎಂ ಮಷಿನ್‌ ಬದಲಾಯಿಸಲು ಕಾಂಗ್ರೆಸ್‌- ಜೆಡಿಎಸ್‌ ಪ್ರಯತ್ನಿಸಬಹುದು. ಅವು ತಮ್ಮ ಕೊನೆಯ ಅಸ್ತ್ರವಾಗಿ ಹೆಚ್ಚುವರಿಯಾಗಿ ನೀಡಲಾದ ಮಷಿನ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.

ಚುನಾವಣೆ ಘೋಷಣೆ ಆದ ದಿನದಿಂದ ಮಲ್ಲಿಕಾರ್ಜುನ ಖರ್ಗೆ ಕ್ಷೇತ್ರ ಬಿಟ್ಟು ಹೊರಬಂದಿಲ್ಲ. ಅದೇ ರೀತಿ ಮತದಾನದ ಬಳಿಕವೂ ಅವರು ಕ್ಷೇತ್ರ ಬಿಟ್ಟು ಹೊರಬರುವ ಸಾಧ್ಯತೆ ಇಲ್ಲ. ಈಗಾಗಲೇ ಅಲ್ಲಿನ ಡಿಸಿ, ಎಸ್‌ಪಿ ಸೇರಿ ಸಂಪೂರ್ಣ ಆಡಳಿತ ಯಂತ್ರವನ್ನು ಖರ್ಗೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಬಿಜೆಪಿ ಚುನಾವಣಾ ಆಯೋಗಕ್ಕೆ ಸೂಕ್ಷ್ಮ ಕ್ಷೇತ್ರ ಎಂದು ಪರಿಗಣಿಸಲು ತಿಳಿಸಿದ್ದೇವೆ. ಅಲ್ಲಿನ ಅಧಿಕಾರಿಗಳ ಮೇಲೆ ನಮಗೆ ವಿಶ್ವಾಸ ಇಲ್ಲ. ಹೀಗಾಗಿ ಅವರನ್ನು ಬದಲಾಯಿಸುವಂತೆ ಶೀಘ್ರ ಚುನಾವಣಾ ಬಗ್ಗೆ ದೂರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಮಂಡ್ಯ ಹಾಗೂ ತುಮಕೂರಲ್ಲೂ ಜೆಡಿಎಸ್‌ ತನ್ನ ಕೊನೆಯ ಅಸ್ತ್ರವಾಗಿ ಇವಿಎಂ ಬದಲಾಯಿಸುವ ಪ್ರಯತ್ನ ಮಾಡಬಹುದು ಎಂದು ಸಂಶಯ ವ್ಯಕ್ತಪಡಿಸಿದರು.