ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರ ಮನ ಒಲಿಸಲು ನಡೆಯುವ ಸರ್ಕಸ್‌ ಅಷ್ಟಿಷ್ಟಲ್ಲ. ಇದರ ಅಂಗವಾಗಿ ಹಣ, ಹೆಂಡ, ಬೆಳ್ಳಿ, ಬಂಗಾರ, ಬಟ್ಟೆಹಂಚಲಾಗುತ್ತದೆ. ಇದು ಕದ್ದು ಮುಚ್ಚಿ ನಡೆಯುವ ಕಾರ‍್ಯವಾದರೂ, ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಹೆಂಡತಿ ತೊರೆದ ಗಂಡನ ವಿರುದ್ಧ ಮಾಯಾ ವ್ಯಂಗ್ಯ ಪ್ರಹಾರ

ಇಷ್ಟು ವರ್ಷಗಳ ಚುನಾವಣೆಯಲ್ಲಿ ನಡೆದು ಬಂದ ಹಣ, ಹೆಂಡ ಹಂಚುವ ಕಾರ‍್ಯ ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮಟ್ಟತಲುಪಿದೆ. ಈ ಬಾರಿ ದೇಶದ ಚುನಾವಣಾ ಇತಿಹಾಸದಲ್ಲೇ ಅತಿ ಹೆಚ್ಚು ಹಣ, ಹೆಂಡ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಈ ಕುರಿತ ವಿವರ ಇಲ್ಲಿದೆ.

ಮತದಾರರ ಓಲೈಕೆಗೆ ಕೆಟ್ಟ ಸರ್ಕಸ್‌

ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಇಲ್ಲಿ 5 ವರ್ಷಕ್ಕೊಮ್ಮೆ (ಮಧ್ಯಂತರ ಚುನಾವಣೆ ಹೊರತುಪಡಿಸಿ) ನಡೆಯುವ ಚುನಾವಣೆ ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಬಿಂಬಿಸಲಾಗುತ್ತದೆ. ಇಂತಹ ಉಪಮೆಗಳ ನಡುವೆ ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಜನರ ತೀರ್ಮಾನವೇ ಅಂತಿಮ.

ಇಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಮಾಡುವ ಸರ್ಕಸ್‌ ಒಂದೆರಡಲ್ಲ. ಆದರೆ, ಮತದಾರರ ಮನ ಸೆಳೆಯಲು ಮಾಡುವ ಪ್ರಾಮಾಣಿಕ ಪ್ರಯತ್ನಕ್ಕಿಂತ ಅಪ್ರಾಮಾಣಿಕ ಹಾಗೂ ಅಕ್ರಮ ಮಾರ್ಗಗಳೇ ಇತ್ತೀಚೆಗೆ ಹೆಚ್ಚಾಗಿವೆ. ಮತಗಳಿಗೆ ಇಂತಿಷ್ಟುಎಂದು ಹಣ ಹಂಚಲಾಗುತ್ತಿದೆ.

ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ ಕಂಪನ : ನಿಜವಾಗುತ್ತಾ ಭವಿಷ್ಯ ?

ಮತದಾನದ ಹಿಂದಿನ ದಿನ ಹೆಂಡದ ಹೊಳೆಯೇ ಹರಿಯುತ್ತದೆ. ಎಲ್ಲರನ್ನೂ ಒಂದೆಡೆ ಸೇರಿಸಿ ಬಾಡೂಟ, ಭರ್ಜರಿ ಔತಣ ನೀಡಲಾಗುತ್ತದೆ. ಇದು ಪುರುಷ ಮತದಾರರನ್ನು ಓಲೈಸಲು ನಡೆಯುವ ತಂತ್ರ. ಇನ್ನು ಮಹಿಳಾ ಮತದಾರರನ್ನು ಮರುಳು ಮಾಡಲು ಸೀರೆ, ರವಿಕೆ ನೀಡುವುದು, ಮೂಗುತಿ, ಕುಕ್ಕರ್‌, ಪಾತ್ರೆ ಪಗಡೆ, ಮಿಕ್ಸಿ, ಟೀವಿ ನೀಡಲಾಗುತ್ತದೆ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ಅಷ್ಟೇ ಅಲ್ಲ, ವೀಳ್ಯದೆಲೆ-ಅಡಿಕೆ ನೀಡಿ ತಮಗೇ ಮತ ನೀಡುವಂತೆ ಮಾತು ಪಡೆಯುವ ಕಾರ‍್ಯವೂ ನಡೆಯುತ್ತದೆ.

ಏಕೆ ಈ ಬಾರಿ ಅಕ್ರಮಗಳು ಹೆಚ್ಚು?

ಇಷ್ಟುವರ್ಷಗಳ ಚುನಾವಣೆಯಲ್ಲಿ ನಡೆಯುತ್ತಿದ್ದ ಹಣ ಹಂಚಿಕೆ ಪ್ರಮಾಣದ ಲೆಕ್ಕ ಒಂದೆಡೆಯಾದರೆ, 2019ರ ಚುನಾವಣೆಯಲ್ಲಿ ಹಂಚಿದ ಮದ್ಯ, ಹಣದ್ದು ಮತ್ತೊಂದು ತೂಕ. ಏಪ್ರಿಲ್‌ 11ರ ಬಳಿಕ ಚುನಾವಣಾ ಆಯೋಗ ಇಡೀ ದೇಶದಲ್ಲಿ ವಶಕ್ಕೆ ಪಡೆದ ಹಣ, ಅಕ್ರಮ ಮದ್ಯದ ಒಟ್ಟಾರೆ ಮೌಲ್ಯ 1460 ಕೋಟಿ ರುಪಾಯಿ. ಎಷ್ಟೇ ಕಟ್ಟೆಚ್ಚರ, ಮುಂಜಾಗ್ರತೆ ವಹಿಸಿದರೂ ರಾಜಕೀಯ ಪಕ್ಷಗಳು ಎಲ್ಲರ ಕಣ್ತಪ್ಪಿಸಿ ಹಣ, ಮದ್ಯ ಹಂಚಿಕೆಯಲ್ಲಿ ಮೇಲುಗೈ ಸಾಧಿಸಿವೆ.

ವಶಕ್ಕೆ ಪಡೆಯಲಾದ ಮದ್ಯ, ಹಣದ ಪ್ರಮಾಣವೇ ಇಷ್ಟಾದರೆ ಇನ್ನು ಮತದಾರರಿಗೆ ನೀಡಿದ ಹಣ, ಮದ್ಯದ ಮೌಲ್ಯ ಸಾವಿರಾರು ಕೋಟಿ ಇರುತ್ತದೆ. ಅದು ಅಕ್ರಮವಾಗಿ ನಡೆಯುವುದರಿಂದ ಯಾರ ಲೆಕ್ಕಕ್ಕೂ ಸಿಗುವುದಿಲ್ಲ. ಇನ್ನು, ಈ ಬಾರಿಯ ಚುನಾವಣೆಯಲ್ಲಿ ಹಣದ ಹಂಚಿಕೆ ಹಾಗೂ ಅಕ್ರಮಗಳು ಹೆಚ್ಚಾಗಲು ಹಿಂದಿನೆಲ್ಲ ಚುನಾವಣೆಗಿಂತ ಈ ಬಾರಿ ಹೆಚ್ಚಿರುವ ಪೈಪೋಟಿಯೇ ಕಾರಣ ಎಂದು ಹೇಳಲಾಗುತ್ತದೆ.

ಲೋಕಸಭಾ ಫಲಿತಾಂಶಕ್ಕೂ ಮುನ್ನವೇ ಪ್ರತಿಪಕ್ಷಗಳಲ್ಲಿ ಬಿರುಕು!

ಕರ್ನಾಟಕಕ್ಕೆ ದೇಶದಲ್ಲೇ 7ನೇ ಸ್ಥಾನ

ಹಣ ಸೇರಿದಂತೆ ವಿವಿಧ ವಸ್ತುಗಳ ಮೌಲ್ಯವನ್ನು ಸೇರಿಸಿದರೆ ಕರ್ನಾಟಕದಲ್ಲಿ ವಶಕ್ಕೆ ಪಡೆಯಲಾದ ಅಕ್ರಮ ವಸ್ತುಗಳ ಮೌಲ್ಯ ಸುಮಾರು 98 ಕೋಟಿ ರುಪಾಯಿ. ಈ ಮೂಲಕ ದೇಶದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳ ಬೆಲೆಯ ಒಟ್ಟು ಮೌಲ್ಯಮಾಪನದಲ್ಲಿ ನಮ್ಮ ರಾಜ್ಯವು 7ನೇ ಸ್ಥಾನ ಪಡೆದುಕೊಂಡಿದೆ.

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ನಂತರದ ಸ್ಥಾನವನ್ನು ನಮ್ಮ ರಾಜ್ಯ ಪಡೆದಿತ್ತು. ಆಗ 150 ಕೋಟಿ ಮೌಲ್ಯದ ಹಣ, ಮದ್ಯ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ದೇಶಾದ್ಯಂತ ನಡೆದ ಅಕ್ರಮ ವಸ್ತುಗಳ ವಶದ ಮೌಲ್ಯಕ್ಕೆ ಹೋಲಿಸಿದರೆ ತಮಿಳುನಾಡು (937.23 ಕೋಟಿ) ಅಕ್ರಮದಲ್ಲಿ ಮುಂದಿದೆ. ಇನ್ನು ಎರಡನೇ ಸ್ಥಾನದಲ್ಲಿ ಗುಜರಾತ್‌ (545 ಕೋಟಿ), ಮೂರನೇ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ (417 ಕೋಟಿ), ಆಂಧ್ರಪ್ರದೇಶ, ಪಂಜಾಬ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

ಡ್ರಗ್ಸ್‌ ಕೂಡ ಹಂಚುತ್ತಾರೆ ಗೊತ್ತೇ?

ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಕೇವಲ ಹಣ, ಮದ್ಯವನ್ನಷ್ಟೇ ಅಲ್ಲ ಮಾದಕ ವಸ್ತುಗಳನ್ನೂ ಬಳಸಲಾಗುತ್ತದೆ. ಇದು ಕರ್ನಾಟಕದಲ್ಲಿ ಅಷ್ಟಾಗಿ ನಡೆಯುವುದಿಲ್ಲ. ಆದರೆ ಪಂಜಾಬ್‌ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮತದಾರರಿಗೆ ಗಾಂಜಾ, ಹೆರಾಯಿನ್‌ ಮತ್ತಿತರ ಮಾದಕ ವಸ್ತುಗಳನ್ನು ನೀಡಲಾಗುತ್ತದೆ. ಅವುಗಳನ್ನೂ ಕೂಡ ಚುನಾವಣಾ ಆಯೋಗ ದೊಡ್ಡ ಪ್ರಮಾಣದಲ್ಲಿ ವಶಕ್ಕೆ ಪಡೆದಿದೆ.

ಟೈರ್‌ನಲ್ಲಿತ್ತು ಕೋಟಿ ಕೋಟಿ ಹಣ!

ಕರ್ನಾಟಕದಲ್ಲಿ ಶಿವಮೊಗ್ಗಕ್ಕೆ ಸಾಗುತ್ತಿದ್ದ ಕಾರಿನ ಟೈರ್‌ (ಸ್ಟೆಪ್ನಿ)ನಲ್ಲಿ ಸಾಗಿಸುತ್ತಿದ್ದ ಕೋಟಿ ಕೋಟಿ ಹಣವನ್ನು ವಶಕ್ಕೆ ಪಡೆಯಲಾಯಿತು. ಹಣ ಸಾಗಿಸುವ ವಿಧಾನಗಳಲ್ಲಿ ಟೈರ್‌ ಬಳಕೆ ಹೊಸದು ಎನ್ನಲಾಗಿತ್ತು. ಇದು ಇಡೀ ದೇಶದ ಗಮನ ಸೆಳೆಯಿತು.

ಪ್ಲಾಸ್ಟಿಕ್‌ ಕವರ್‌ನಲ್ಲಿ ದುಡ್ಡಿನ ಗಂಟು

ಇನ್ನು ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಸೇರಿದ 25 ಲಕ್ಷ ಹಣವನ್ನು ಐ.ಟಿ. ಇಲಾಖೆ ವಶಕ್ಕೆ ಪಡೆದಿತ್ತು. ಈ ಹಣವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಯಾವ ಜಿಲ್ಲೆಗೆ ಹಂಚಬೇಕು ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು.

ಸಿಎಂ ಮನೆಯಲ್ಲಿ ಹಣದ ರಾಶಿ!

ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಮನೆಯಲ್ಲಿಯೇ 14 ಕೋಟಿ ರು. ವಶಕ್ಕೆ ಪಡೆಯಲಾಯಿತು. ಚುನಾವಣೆಯಲ್ಲಿ ಅಕ್ರಮ ಹಣದ ಮೇಲೆ ಕಣ್ಣಿಟ್ಟಿದ್ದ ಆದಾಯ ತೆರಿಗೆ ಇಲಾಖೆ ಸಿಎಂ ಮನೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹವಾಗಿದ್ದ 14 ಕೋಟಿಯನ್ನು ಸೀಜ್‌ ಮಾಡಿತು.

3,300 ಕೋಟಿ ಮೌಲ್ಯದ ಹಣ, ಹೆಂಡ, ಮಾದಕ ವಸ್ತು ಜಪ್ತಿ

ಹೌದು, ದೇಶದಲ್ಲಿ ನಡೆಯುತ್ತಿರುವ 17ನೇ ಲೋಕಸಭಾ ಚುನಾವಣೆಯಲ್ಲಿ ಇಲ್ಲಿಯವರೆಗೆ 3,300 ಕೋಟಿ ಮೌಲ್ಯದ ಮದ್ಯ, ಚಿನ್ನ, ಹಣ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಮೌಲ್ಯ ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ವಶಕ್ಕೆ ಪಡೆದ ಅಕ್ರಮ ವಸ್ತುಗಳ ಮೌಲ್ಯಕ್ಕಿಂತ 300 ಕೋಟಿ ಅಧಿಕವಾಗಿದೆ.

ರಾಷ್ಟ್ರೀಯ ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶಗಳ ಪ್ರಕಾರ ಆ ವರ್ಷ 3 ಸಾವಿರ ಕೋಟಿ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. 2014ರಲ್ಲಿ ಸರ್ಕಾರ ಚುನಾವಣೆ ನಡೆಸಲು ಮಾಡಿದ ವೆಚ್ಚ 3,879 ಕೋಟಿ.

ಇದರ ಲೆಕ್ಕಚಾರದಲ್ಲಿ ವಶಕ್ಕೆ ಪಡೆದ ವಸ್ತುಗಳ ಮೌಲ್ಯವೂ (ಶೇ.93) ಚುನಾವಣಾ ವೆಚ್ಚದಷ್ಟೇ ಅಗುತ್ತದೆ. ಈ ವರ್ಷದ ಚುನಾವಣೆಯಲ್ಲಿ ಮಾಚ್‌ರ್‍ 26ರಿಂದ ಮೇ 3ರ ವರೆಗೆ 796.89 ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ಇದು 2014ರಲ್ಲಿ ವಶಕ್ಕೆ ಪಡೆದ ಹಣದ ಮೌಲ್ಯಕ್ಕೆ ಹೋಲಿಸಿದರೆ ಶೇ.165.68ರಷ್ಟುಹೆಚ್ಚಿದೆ. 2014ರಲ್ಲಿ 299.9 ಕೋಟಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.

66 ಸಾವಿರ ಕೇಜಿ ಡ್ರಗ್ಸ್‌ ವಶ!

2014ರಲ್ಲಿ ವಶಕ್ಕೆ ಪಡೆದ ಮದ್ಯ ಮಾದಕ ವಸ್ತುಗಳ ಪ್ರಮಾಣಕ್ಕಿಂತ 2019ರಲ್ಲಿ ವಶಕ್ಕೆ ಪಡೆದ ವಸ್ತುಗಳ ಪ್ರಮಾಣ ಅತ್ಯಧಿಕವಾಗಿದೆ. ಮಾಚ್‌ರ್‍ 26ರ ವರೆಗೆ 66,324 ಕೆ.ಜಿ ಮಾದಕ ವಸ್ತುಗಳು ಸಿಕ್ಕಿವೆ. ಇದು ಕಳೆದ ಸಾಲಿಗೆ ಹೋಲಿಸಿದರೆ ಶೇ. 288.54ರಷ್ಟುಹೆಚ್ಚಿದೆ.

ಯಾವ ರಾಜ್ಯಕ್ಕೆ ಯಾವ ತಂತ್ರ?

ರಾಜಕೀಯ ಪಕ್ಷಗಳು ದೇಶದ ಎಲ್ಲೆಡೆ ಮತದಾರರನ್ನು ತಮ್ಮತ್ತ ಸೆಳೆಯಲು ಒಂದೇ ರೀತಿಯ ತಂತ್ರ ಬಳಸುವುದಿಲ್ಲ. ಪ್ರತಿ ರಾಜ್ಯಕ್ಕೆ ಅಲ್ಲಿನ ಸ್ಥಳೀಯ ವ್ಯವಸ್ಥೆಯ ಅನುಸಾರ ಪ್ರತ್ಯೇಕ ತಂತ್ರಗಾರಿಕೆ ನಡೆಸುತ್ತವೆ. ಪಂಜಾಬ್‌, ಗುಜರಾತ್‌, ದೆಹಲಿ ಸೇರಿದಂತೆ ಇನ್ನಿತರೆಡೆ ಡ್ರಗ್ಸ್‌ಗೆ ಹೆಚ್ಚಿನ ಆದ್ಯತೆ ನೀಡಿದರೆ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಹಣ, ಹೆಂಡ ಪ್ರಮುಖ ಪಾತ್ರ ವಹಿಸುತ್ತವೆ. ಇನ್ನು ಕೆಲ ರಾಜ್ಯಗಳಲ್ಲಿ ಚಿನ್ನ, ಬೆಳ್ಳಿಯನ್ನು ಹಂಚಲಾಗುತ್ತದೆ.

ಕರ್ನಾಟಕದಲ್ಲಿ ಕಳೆದ ಬಾರಿಗಿಂತ 2 ಪಟ್ಟು ಹೆಚ್ಚು ಹಣ ವಶಕ್ಕೆ!

2014ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಎರಡು ಪಟ್ಟು ಹೆಚ್ಚು ಮೌಲ್ಯದ ಅಕ್ರಮ ಹಣ, ವಸ್ತುಗಳನ್ನು ಪ್ರಸ್ತುತ ಚುನಾವಣೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಕಳೆದ ಬಾರಿ 37.68 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದರೆ, ಈ ಬಾರಿ ಸುಮಾರು 98 ಕೋಟಿ ಮೌಲ್ಯದ ಹಣ, ವಸ್ತುಗಳನ್ನು ಆಯೋಗ ವಶಕ್ಕೆ ಪಡೆದಿದೆ. 39.40 ಕೋಟಿ ಹಣ, 48.82 ಲಕ್ಷ ಮೌಲ್ಯದ ಮದ್ಯ, 7.52 ಕೋಟಿ ಮೌಲ್ಯದ ಮಾದಕ ವಸ್ತುಗಳು, 3.85 ಕೋಟಿ ಮೌಲ್ಯದ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

1.41 ಕೋಟಿ ಲೀಟರ್‌: ಇಲ್ಲಿಯವರೆಗೆ ವಶಕ್ಕೆ ಪಡೆದ ಮದ್ಯದ ಪ್ರಮಾಣ

3870.34 ಕೋಟಿ: 2014ರಲ್ಲಿ ಸರ್ಕಾರ ಚುನಾವಣೆ ನಡೆಸಲು ಮಾಡಿದ ವೆಚ್ಚ

30 ಸಾವಿರ ಕೋಟಿ- ಸರ್ಕಾರ, ಪಕ್ಷಗಳಿಂದ 2014ರ ಚುನಾವಣೆಯಲ್ಲಿ ಮಾಡಲಾದ ಒಟ್ಟು ವೆಚ್ಚ

98 ಕೋಟಿ: ಕರ್ನಾಟಕದಲ್ಲಿ ವಶಕ್ಕೆ ಪಡೆದ ಹಣ, ಹೆಂಡ ವಸ್ತುಗಳ ಮೌಲ್ಯ

205 ಕೋಟಿ: ಪಂಜಾಬ್‌ನಲ್ಲಿ ವಶಕ್ಕೆ ಪಡೆದ ಡ್ರಗ್ಸ್‌ ಮೌಲ್ಯ