ಯಾದಗಿರಿ[ಮಾ.12]: ಚುನಾವಣಾ ನೀತಿ ಸಂಹಿತೆಯ ಬಿಸಿ ಇದೀಗ ಬಿಜೆಪಿ ಕಾರ್ಯಕರ್ತರೊಬ್ಬರ ಲಗ್ನ ಪತ್ರಿಕೆಗೂ ತಟ್ಟಿದೆ. ಲಗ್ನ ಪತ್ರಿಕೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರುಗಳ ಫೋಟೋಗಳನ್ನು ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಹಂಚದೆ ಉಳಿದ ಲಗ್ನಪತ್ರಿಕೆಗಳನ್ನು ಚುನಾವಣಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.

ಶಹಾಪುರದ ಬಿಜೆಪಿ ಕಾರ್ಯಕರ್ತ ಬಸವರಾಜ್‌ ಹಾಗೂ ಅವರ ಸಹೋದರ ಶರಣಬಸವರ ಮದುವೆ ಮಾ.24 ರಂದು ಶಹಾಪುರದ ಅರಬೋಳ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದೆ. ಕಟ್ಟಾಬಿಜೆಪಿ ಕಾರ್ಯಕರ್ತರಾಗಿರುವ ಬಸವರಾಜ್‌ ಕುಟುಂಬ ಪ್ರಧಾನಿ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರ ಚಿತ್ರಗಳನ್ನು ಆಮಂತ್ರಣದಲ್ಲಿ ಅಚ್ಚು ಹಾಕಿದ್ದಲ್ಲದೆ, ಮೋದಿಗೆ ಮತ ಹಾಕುವಂತೆ ವಿನಂತಿಸಿತ್ತು.

ಮಾ.3ರಂದೇ 200 ಲಗ್ನಪತ್ರಿಕೆಗಳನ್ನು ಪ್ರಕಟಿಸಿ, ಹಂಚಿದ್ದ ಬಸವರಾಜ್‌ ಚಂಡು ಕುಟುಂಬ, ಇನ್ನೂ ಕೆಲವು ಲಗ್ನಪತ್ರಿಕೆಗಳನ್ನು ಹಂಚಲು ಮುಂದಾಗಿತ್ತು. ಆದರೆ, ಭಾನುವಾರ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಉಳಿದ ಲಗ್ನಪತ್ರಿಕೆಗಳನ್ನು ಹಂಚದಂತೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ಬಸವರಾಜ್‌ ಕುಟುಂಬ ಚುನಾವಣಾ ಅಧಿಕಾರಿಗಳಿಗೆ ಹಂಚದೇ ಉಳಿದ ಲಗ್ನ ಪತ್ರಿಕೆಗಳನ್ನು ವಶಕ್ಕೆ ಒಪ್ಪಿಸಿದೆ.