ಗದಗ (ಏ. 10): ಅಕ್ರಮ ಗಣಿಗಾರಿಕೆ ಸೇರಿದಂತೆ ವಿವಿಧ ಪ್ರಕರಣಗಳ ಹಿನ್ನಲೆಯಲ್ಲಿ ಬಳ್ಳಾರಿಯಿಂದ ಗಡಿಪಾರಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಗದಗ ನಗರದಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಯತ್ನಿಸಿ ವಿಫಲರಾಗಿದ್ದಾರೆ.

ಗಡಿಪಾರಿನಿಂದಾಗಿ ಬಳ್ಳಾರಿಯಲ್ಲಿ ಮತದಾನಕ್ಕೆ ಅವಕಾಶವಿಲ್ಲ. ಹೀಗಾಗಿ ಗದಗದಲ್ಲಾದರೂ ಮತದಾನ ಮಾಡಬೇಕು ಎನ್ನುವ ರೆಡ್ಡಿ ಆಸೆಗೆ ಚುನಾವಣಾ ಆಯೋಗ ತಣ್ಣೀರೆರಚಿದೆ. ಸೂಕ್ತ ದಾಖಲೆಗಳಿಲ್ಲ ಎನ್ನುವ ಕಾರಣ ನೀಡಿ ಆಯೋಗ ರೆಡ್ಡಿ ಅರ್ಜಿಯನ್ನು ತಿರಸ್ಕರಿಸಿದೆ.

ರೆಡ್ಡಿ ಆಪ್ತ ಮಾಜಿ ಸಚಿವ ಶ್ರೀರಾಮುಲು ಇಲ್ಲಿನ ಹೊಸ ಬಸ್‌ ನಿಲ್ದಾಣದ ಬಳಿ ಸ್ವಂತ ಮನೆ ಹೊಂದಿದ್ದಾರೆ. ಅವರು ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕಟ್ಟಿಸಿದ ಮನೆ ಇದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಶ್ರೀರಾಮುಲು ಮನೆಯನ್ನು ತಾವು ಬಾಡಿಗೆ ಪಡೆದಿರುವುದಾಗಿ ಹೇಳಿ ಜನಾರ್ದನ ರೆಡ್ಡಿ ಅದರ ವಿಳಾಸ ನೀಡಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಬಾಡಿಗೆ ಪತ್ರಕ್ಕೆ ರೆಡ್ಡಿ ಸಹಿ ಇರಲಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ ದಾಖಲೆಗಳು ಸರಿ ಇಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದೆ.