ಬೆಂಗಳೂರು :  ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆ ನಡೆಸಲು ನಾಗರಿಕರ ಪಾತ್ರ ಬಹಳ ಮುಖ್ಯ ಎಂಬುದರನ್ನು ಅರಿತ ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಘಟನೆಗಳ ಪತ್ತೆಗೆ ಜನತೆಯ ಭಾಗವಹಿಸುವಿಕೆಗಾಗಿ ‘ಸಿವಿಜಿಲ್‌’ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ನಾಗರಿಕರ ಕಣ್ಣ ಮುಂದೆ ನೀತಿ ಸಂಹಿತಿ ಉಲ್ಲಂಘನೆಯಾಗುತ್ತಿದ್ದರೆ ಕ್ಷಣಾರ್ಧದಲ್ಲಿ ಆಡಿಯೋ, ವಿಡಿಯೋ ತೆಗೆದು ಸಿವಿಜಿಲ್‌ ಮೂಲಕ ದೂರುಗಳನ್ನು ನೀಡಬಹುದು. ಬಳಕೆದಾರರ ಸ್ನೇಹಿಯಾಗಿ ಅಪ್ಲಿಕೇಶನ್‌ ಸಿದ್ಧಪಡಿಸಲಾಗಿದೆ. ವಾರ್ತಾ ಇಲಾಖೆಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸಿವಿಜಿಲ್‌ ಆ್ಯಪ್‌ ಬಿಡುಗಡೆ ಮಾಡಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣಾ ಅಕ್ರಮಗಳ ಕುರಿತು ಸಾರ್ವಜನಿಕರು ದೂರುಗಳನ್ನು ನೀಡಲು ಚುನಾವಣಾಧಿಕಾರಿಗಳ ಕಚೇರಿಗೆ ಹೋಗುವ ಅಗತ್ಯ ಇಲ್ಲ. ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆ ಮೂಲಕ ನೀತಿ ಸಂಹಿತೆಯ ದೂರುಗಳನ್ನು ದಾಖಲಿಸಬಹುದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಲಾಗಿದ್ದು, ಇದೀಗ ರಾಜ್ಯವ್ಯಾಪಿ ವಿಸ್ತರಿಸಲಾಗಿದೆ ಎಂದು ಹೇಳಿದರು.

ಹಣ ಹಂಚಿಕೆ, ಗೃಹ ಬಳಕೆ ವಸ್ತುಗಳ ಉಚಿತ ವಿತರಣೆ, ಉದ್ರೇಕಕಾರಿ ಭಾಷಣ, ಪಾವತಿ ಸುದ್ದಿ, ಸುಳ್ಳು ಸುದ್ದಿ, ಬಂದೂಕು, ಇತರೆ ಶಸ್ತ್ರಾಸ್ತ್ರಗಳ ಪ್ರದರ್ಶನ, ಬೆದರಿಕೆಗಳು ಸೇರಿದಂತೆ ಇತರೆ ಚುನಾವಣಾ ಅಕ್ರಮಗಳ ಬಗ್ಗೆ ಆಡಿಯೋ ಅಥವಾ ವಿಡಿಯೋ ಮಾಡಿ ದೂರು ಕೊಡಬಹುದು. ದೂರುದಾರರ ವಿವರ ಗೌಪ್ಯವಾಗಿಡಲಾಗುತ್ತದೆ. ದೂರು ದಾಖಲಾದ ಕೂಡಲೇ ತನಿಖೆಗಾಗಿ ಫ್ಲೈಯಿಂಗ್‌ ಸ್ಕಾ$್ವಡ್‌ ತೆರಳಲಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಿವರಿಸಿದರು.

ರಾಜ್ಯದಲ್ಲಿ 330 ಅಧಿಕಾರಿಗಳು, 7475 ಫೀಲ್ಡ್‌ ಯೂನಿಟ್‌ಗಳು, 10,489 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಈವರೆಗೆ ಆ್ಯಪ್‌ ಮೂಲಕ 186 ದೂರುಗಳು ದಾಖಲಾಗಿವೆ. ಈ ಪೈಕಿ 111 ಸುಳ್ಳು ಪ್ರಕರಣಗಳು ದಾಖಲಾಗಿವೆ. 45 ಪ್ರಕರಣಗಳು ವಿಲೇವಾರಿ ಮಾಡಲಾಗಿದ್ದು, 30 ಪ್ರಕರಣಗಳ ತನಿಖೆ ಪ್ರಗತಿಯಲ್ಲಿವೆ ಎಂದರು.

ಆ್ಯಪ್‌ ಬಳಸುವುದು ಹೇಗೆ?

ಚುನಾವಣಾ ಅಕ್ರಮಗಳ ಪತ್ತೆಗಾಗಿ ಜನರಿಂದ ಮಾಹಿತಿ ಪಡೆದುಕೊಳ್ಳಲು ಸಿದ್ಧಪಡಿಸಿರುವ ಸಿವಿಜಿಲ್‌ ಆ್ಯಪ್‌ ಜಿಪಿಎಸ್‌ ಆಧಾರಿತವಾದುದಾಗಿದೆ. ಚುನಾವಣಾ ಅಕ್ರಮಗಳ ಕುರಿತು ಯಾವ ಪ್ರದೇಶದಿಂದ ದೂರು ದಾಖಲಾಗಿದೆ ಎಂಬುದನ್ನು ಗಮನಿಸುವ ಆಯೋಗವು ಪ್ರದೇಶದ ಸಮೀಪದಲ್ಲಿನ ಫ್ಲೈಯಿಂಗ್‌ ಸ್ಕಾ$್ವಡ್‌ಗೆ ಮಾಹಿತಿ ನೀಡಲಿದೆ. ಜಿಐಎಸ್‌ ಮ್ಯಾಪ್‌ ಆಧಾರದಲ್ಲಿ ದೂರುಗಳನ್ನು ಟ್ರ್ಯಾಕ್‌ ಮಾಡಲಾಗುತ್ತದೆ. ಮಾಹಿತಿ ಪಡೆದ 15 ನಿಮಿಷದಲ್ಲಿ ತಂಡವು ಸ್ಥಳಕ್ಕೆ ಧಾವಿಸಲಿದೆ. ದೂರುಗಳನ್ನು ಪರಿಶೀಲನೆ ನಡೆಸಿದ ಬಳಿಕ 100 ನಿಮಿಷದಲ್ಲಿ ಅಗತ್ಯ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ನೀಡಲಾಗುತ್ತದೆ.

ಯಾವುದರ ಬಗ್ಗೆ ದೂರಬಹುದು?

ಹಣ ಹಂಚಿಕೆ, ಗೃಹ ಬಳಕೆ ವಸ್ತುಗಳ ಉಚಿತ ವಿತರಣೆ, ಉದ್ರೇಕಕಾರಿ ಭಾಷಣ, ಪಾವತಿ ಸುದ್ದಿ, ಸುಳ್ಳು ಸುದ್ದಿ, ಬಂದೂಕು, ಇತರೆ ಶಸ್ತ್ರಾಸ್ತ್ರಗಳ ಪ್ರದರ್ಶನ, ಬೆದರಿಕೆಗಳು ಸೇರಿದಂತೆ ಇತರೆ ಚುನಾವಣಾ ಅಕ್ರಮಗಳ ಬಗ್ಗೆ ಆಡಿಯೋ ಅಥವಾ ವಿಡಿಯೋ ಮಾಡಿ ದೂರು ಕೊಡಬಹುದು.

ಆಯೋಗ ಏನು ಮಾಡುತ್ತೆ?

ದೂರುದಾರರ ವಿವರ ಗೌಪ್ಯವಾಗಿಡಲಾಗುತ್ತದೆ. ದೂರು ದಾಖಲಾದ ಕೂಡಲೇ ತನಿಖೆಗಾಗಿ ಫ್ಲೈಯಿಂಗ್‌ ಸ್ಕಾ$್ವಡ್‌ ತೆರಳಲಿದೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಿದೆ.