ಹಾಸನ: ತುಮಕೂರು ಸಂಸದ ಮುದ್ದಹನುಮೇಗೌಡ ಹಾಗೂ ಕಾಂಗ್ರೆಸ್ ಧುರೀಣ ರಾಜಣ್ಣ ಅವರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಕಣಕ್ಕಿಳಿದಿದ್ದರು. ಆದರೆ, ಇಬ್ಬರ ಮನವೊಲಿಸಿ ಕಡೇ ಕ್ಷಣದಲ್ಲಿ ನಾಮಪತ್ರವನ್ನು ವಾಪಸ್ಸು ಪಡೆಯಲಾಗಿತ್ತು. ಇವರಿಬ್ಬರಿಗೂ ಸೆಟಲ್ ಮಾಡಿದ್ದೀವಿ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದು, ಚುನಾವಣೆ ನಂತರವೂ ಸರಕಾರ ಮುಂದುವರಿಯುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಡೇ ವಿಶ್ವವೇ ಭಾರತದ ಲೋಕಸಭಾ ಚುನಾವಣೆಯನ್ನು ಗಮನಿಸುತ್ತಿದೆ. ಇಡೀ ವಿಶ್ವದಲ್ಲಿ ಭಾರತ ಆರ್ಥಿಕವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಲೋಕ ಸಮರ ನಡೆಯುತ್ತಿದೆ. ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರದ ಕಡೆ ದೇಶವನ್ನು ಒಂದೆಡೆ ನಡೆಸುವ ಹೊಣೆ ಇದ್ದರೆ, ಮತ್ತೊಂದೆಡೆ ಸಮಾಜವನ್ನು ಒಡೆಯುವ, ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಈ ಬಾರಿ ಜನರ ಆಯ್ಕೆ ಕಾಂಗ್ರೆಸ್ ಆಗಲಿದೆ, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಿರಾಯಾಸವಾಗಿ ಗೆಲ್ಲಲಿದ್ದಾರೆ. ನಮ್ಮ ಕಾಂಗ್ರೆಸ್‌ನಲ್ಲಿ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ. ಬಿಜೆಪಿ ಅಜೆಂಡಾ ಮತ್ತೊಮ್ಮೆ ಮೋದಿ ಅಂತಾರೆ. ನಿಮ್ಮ ಕಳೆದ ಐದು ವರ್ಷಗಳ ರಿಪೋರ್ಟ್ ಕೊಡಿ ಎಂದರು. ನೀವು ಈ ದೇಶದ ಪ್ರಧಾನಿಯಾಗಿ ಯಾವ ಯೋಜನೆಯಲ್ಲಿ ನಮ್ಮ ಸರ್ಕಾರ ಶೇ.20ರಷ್ಟು ಕಮಿಷನ್ ಪಡೆದಿದೆ ಎಂಬುದನ್ನು ಸಾಕ್ಷಿ ಸಮೇತ ತೋರಿಸಬೇಕೆಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಪರಮೇಶ್ವರ್, ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ. ಸಚಿವರಾದ ಡಿಕೆಶಿ ಮತ್ತು ಎಂಬಿ ಪಾಟೀಲ್ ನಡುವೆ ಪ್ರತ್ಯೇಕ ಧರ್ಮ ವಿಚಾರ ಅವರ ವೈಯಕ್ತಿಕ ಅಭಿಪ್ರಾಯವೆಂದರು. 

'ನಾನು ಹಿಂದೆ ಸ್ಪಷ್ಟವಾಗಿ ಹೇಳಿದ್ದೆ. ನಮ್ಮ ಕಾಂಗ್ರೆಸ್‌ಗೂ ಲಿಂಗಾಯತ ಪ್ರತ್ಯೇಕ ಧರ್ಮಕ್ಕೂ ಸಂಬಂಧವಿಲ್ಲ. ಸೈನ್ಯಕ್ಕೆ ಸಂಬಂಧಿಸಿದಂತೆ ಸೈನ್ಯ ಮತ್ತು ಹೆಲಿಕಾಪ್ಟರ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೇ ನಾವು ಮೋದಿ ವಿರುದ್ಧ ಆರೋಪಿಸಿದ್ದವು. ಆದ್ರೆ ಮೋದಿಯವರು ತಮ್ಮ ಭಾಷಣದಲ್ಲೂ ಸೈನ್ಯದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ, ಎಂದರು.

ಕೇಂದ್ರ ಸರ್ಕಾರ ತೆರಿಗೆ ಇಲಾಖೆಯನ್ನು ಈಗ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ವಿರುದ್ದ ಕೇಂದ್ರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ನಮ್ಮ ನಾಯಕರಿಗೆ ನೊಟೀಸ್ ನೀಡುವ ಮೂಲಕ ದರ್ಪ ಮತ್ತು ಬೆದರಿಸುವ ತಂತ್ರವೆಸಗುತ್ತಿದೆ. ಮೋದಿ ಪ್ರಧಾನಿಯಾಗಿಯೂ ಕ್ಷುಲ್ಲಕವಾಗಿ ಮಾತನಾಡುತ್ತಿದ್ದಾರೆ. ಮೊದಲು ಮೋದಿ ಕಾಂಗ್ರೆಸ್ ಇತಿಹಾಸವನ್ನು ಅರಿಯಲಿ, ಎಂದು ಕಿವಿಮಾತು ಹೇಳಿದರು.

ಇಪ್ಪತ್ತು ಪಕ್ಷಗಳು ಸೇರಿ ಮಹಾಘಟಬಂಧನ್ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಕೋಮುವಾದಿ ಬಿಜೆಪಿ ಎದುರಿಸಲು ಮೈತ್ರಿ ಮಾಡಿಕೊಂಡಿದ್ದೇವೆ. ತುಮಕೂರಿನಲ್ಲಿ ದೇವೇಗೌಡರು ಹೆಚ್ಚು ಬಹುಮತಗಳಿಂದ ಗೆಲ್ಲಲಿದ್ದಾರೆ, ಎಂಬ ವಿಶ್ವಾಸ ವ್ಯಕ್ತಪಡಿಸಿದರು.