ಬೆಂಗಳೂರು :  ಕೇಂದ್ರ ಸರ್ಕಾರದ ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದು, ಕ್ಷೇತ್ರದಲ್ಲಿ 25.25 ಕೋಟಿ ಮೊತ್ತದ 296 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಸ್ಪಷ್ಟಪಡಿಸಿದ್ದಾರೆ.

ಸಂಸದರ ನಿಧಿಯ ಅನುದಾನ ಬಳಕೆಯಲ್ಲಿ ಡಿ.ಕೆ.ಸುರೇಶ್‌ ಹಿಂದೆ ಬಿದ್ದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ದಾಖಲೆಗಳ ಸಹಿತ ಮಾಹಿತಿ ನೀಡಿರುವ ಅವರು, ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರವೇ ತಾವು ನಿಧಿ ಬಳಕೆಯಲ್ಲಿ ಅಗ್ರ ಪಂಕ್ತಿಯಲ್ಲಿರುವುದಾಗಿ ಹೇಳಿದ್ದಾರೆ.

2014ರಿಂದ 2019ನೇ ಸಾಲಿನವರೆಗೆ ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕೇಂದ್ರ ಸರಕಾರ 25 ಕೋಟಿ ಬಿಡಗಡೆ ಮಾಡಿದೆ. ಇದಕ್ಕೆ ಕ್ರೂಢೀಕೃತವಾಗಿರುವ ಬಡ್ಡಿ 44.11 ಲಕ್ಷ ಸೇರಿ ಒಟ್ಟು 25.44 ಕೋಟಿ ಬಳಕೆಗೆ ಅವಕಾಶವಿತ್ತು. ಈ ಪೈಕಿ ಕಳೆದ ಐದು ವರ್ಷದಲ್ಲಿ 25.25 ಕೋಟಿ ಮೊತ್ತದ 296 ಕಾಮಗಾರಿಗಳನ್ನು ಯೋಜನೆಯ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲು ಶಿಫಾರಸು ಮಾಡಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಾನು ಸಂಸದರ ಅನುದಾನ ಬಿಡುಗಡೆಯಲ್ಲಿ ಹಿಂದೆ ಬಿದ್ದಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಈಗಾಗಲೇ ನಾನು ಶಿಫಾರಸು ಮಾಡಿರುವ ಎಲ್ಲಾ ಕಾಮಗಾರಿಗಳಿಗೂ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 285 ಕಾಮಗಾರಿಗಳು ಪೂರ್ಣಗೊಂಡಿದ್ದು, 5.53 ಕೋಟಿ ಮೊತ್ತದ 11 ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಸರಕಾರವು ಬಿಡುಗಡೆ ಮಾಡಬೇಕಿದ್ದ ಎಲ್ಲಾ ಕಂತಿನ ಅನುದಾನವೂ ಬಿಡುಗಡೆಯಾಗಿದೆ. ಜತೆಗೆ ಯಾವುದೇ ಕಾಮಗಾರಿಯೂ ಆಡಳಿತಾತ್ಮಕ ಅನುಮೋದನೆಗೆ ಬಾಕಿ ಉಳಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

5.53 ಕೋಟಿ ಮೊತ್ತದ 11 ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ಕಾಮಗಾರಿ ಮುಗಿದ ಬಳಿಕ ಹಣ ಪಾವತಿಸಲಾಗುತ್ತದೆ. ಪೂರ್ಣಗೊಂಡಿರುವ 285 ಕಾಮಗಾರಿ ಸೇರಿದಂತೆ ಅನುಷ್ಠಾನಕ್ಕೆ ಶಿಫಾರಸು ಮಾಡಿರುವ 296 ಕಾಮಗಾರಿಗಳ ಪೈಕಿ 154 ಶುದ್ಧ ಕುಡಿಯುವ ನೀರಿನ ಘಟಕ, 20 ಬಸ್‌ ತಂಗುದಾಣ, 107 ಸ್ಮಾರ್ಟ್‌ ಕ್ಲಾಸ್‌ ತರಗತಿ ಕೊಠಡಿಗಳ ನಿರ್ಮಾಣ, 9 ಸಮುದಾಯ ಭವನ, ಚನ್ನಪಟ್ಟಣದಲ್ಲಿ 2 ಚಿತಾಗಾರ, 2 ಸಂಸದರ ಆದರ್ಶ ಗ್ರಾಮ, 1 ಕೇಂದ್ರೀಯ ವಿದ್ಯಾಲಯ ಕಟ್ಟಡ, 1 ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.