ಶಿವಮೊಗ್ಗ(ಮಾ.16): ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ ಶಿವಕುಮಾರ್ ವಹಿಸಿಕೊಳ್ಳಬೇಕು ಎನ್ನುವ ಆಗ್ರಹ ಜೋರಾಗಿದೆ. ಜೆಡಿಎಸ್ ನಾಯಕರು ಡಿಕೆಶಿಗೆ ಟಾಸ್ಕ್‌ವೊಂದನ್ನು ನೀಡಿದ್ದು, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಪರ ಕೆಲಸ ಮಾಡಿದರೆ ಮಾತ್ರ ಕನಕಪುರದಲ್ಲಿ ಜೆಡಿಎಸ್ ಕಾರ್ಯಕರ್ತರು ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್‌ಗೆ ಸಾಥ್ ನೀಡಲಿದ್ದಾರೆ ಎಂಬ ಷರತ್ತು ವಿಧಿಸಿದ್ದಾರೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ: ಡಿ.ಕೆ. ಶಿವಕುಮಾರ್ ಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು..!

ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕಾದರೆ ಡಿಕೆಶಿ ಅವರೇ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಬೇಕು, ಎಂಬುವುದು ಜೆಡಿಎಸ್ ಪಟ್ಟು. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಹೊಣೆ ಕರ್ನಾಟಕದ ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಳ್ಳುವ ಡಿ.ಕೆ ಶಿವಕುಮಾರ್ ಅವರಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.

ಶಿವಮೊಗ್ಗ ಲೋಕಸಭೆ ಕ್ಷೇತ್ರ ಜೆಡಿಎಸ್​ಗೆ, ಅಭ್ಯರ್ಥಿಯೂ ಫೈನಲ್.!

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾದ ಬಳ್ಳಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರನ್ನು ಭಾರೀ ಮತಗಳ [2.5 ಲಕ್ಷ] ಅಂತರದಲ್ಲಿ ಗೆಲ್ಲಿಸುವಲ್ಲಿ ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಅದೇ ಉಪಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಬಿಜೆಪಿಯ ಬಿ.ವೈ ರಾಘವೇಂದ್ರ ಎದುರು ಕೇವಲ 52,148 ಮತಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಒಟ್ಟು ಚಲಾವಣೆಯಾದ ಮತಗಳಲ್ಲಿ ಬಿ.ವೈ ರಾಘವೇಂದ್ರ ಶೇ.50.72ರಷ್ಟು ಪಡೆದರೆ, ಮಧು ಬಂಗಾರಪ್ಪ ಶೇ.45.85ರಷ್ಟು ಮತಗಳನ್ನು ಪಡೆದಿದ್ದರು. 

ಈಡಿಗ, ಒಕ್ಕಲಿಗ ಮತಗಳ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಡಿಕೆಶಿ ಉಸ್ತುವಾರಿ ವಹಿಸಿಕೊಂಡರೆ, ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಸುಲಭ ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರ.