ಧಾರವಾಡ(ಮಾ.19): ಬೆಳಗ್ಗೆ ಎದ್ದ ಕೂಡಲೇ ಬಾಗಿಲು ತೆರೆದರೆ ಹೊಸ್ತಿಲಲ್ಲಿ ನಂದಿನಿ ಹಾಲಿನ ಪ್ಯಾಕೇಟ್. ಕೈಗೆತ್ತಿ ನೋಡಿದರೆ ದಯವಿಟ್ಟು ಮತದಾನ ಮಾಡಿ ಎಂಬ ಮನವಿಯ ಒಕ್ಕಣಿಕೆ. ಇದು ಮತದಾನಕ್ಕೆ ಜಾಗೃತಿ ಮೂಡಿಸಲು ಧಾರವಾಡದ ಕೆಎಂಎಫ್ ಕಂಡುಕೊಂಡ ಮಾರ್ಗ.

ಹೌದು. ಮತದಾನದ ಮಹತ್ವ ಸಾರಲು ಮುಂದಾಗಿರುವ ರಾಜ್ಯದ ಕೆಎಂಎಫ್ ಘಟಕ, ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಮತದಾನ ಮಾಡಿ ಎಂಬ ಒಕ್ಕಣಿಕೆ ಬರೆದಿದೆ. ಅಲ್ಲದೇ ಕರ್ನಾಟಕದಲ್ಲಿ ನಡೆಯಲಿರುವ ಎರಡು ಹಂತದ ಮತದಾನ ದಿನಾಂಕವನ್ನೂ ಪ್ಯಾಕೇಟ್ ಮೇಲೆ ನಮೂದಿಸಲಾಗಿದೆ.

ಇದಿಷ್ಟೇ ಅಲ್ಲದೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ಇಂಗ್ಲೀಷ್‌ನಲ್ಲಿ ಮನವಿ ಮಾಡಲಾಗಿದೆ. ಜೊತೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಟೋಲ್ ಫ್ರೀ ನಂಬರ್ ಕೂಡ ಮುದ್ರಿಸಲಾಗಿದೆ.

ಸ್ವೀಪ್ ಸಮಿತಿ ಸಹಯೋಗದಲ್ಲಿ ಕೆಎಂಎಫ್ ಈ ವಿನೂತನ ಪ್ರಯೋಗ ಜಾರಿಗೆ ತಂದಿದ್ದು, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕೆಎಂಎಫ್ ಉತ್ಪನ್ನಗಳ ಮೇಲೆ ಮತ ಜಾಗೃತಿ ಸಂದೇಶ ಸಾರಲಾಗಿದೆ.