ರಾಮನಗರ(ಮಾ.15): ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೇ ರಾಮನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯದ ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತ ಇದೀಗ ಎಲ್ಲರ ಚಿತ್ತ ಹರಿದಿದೆ.

ಸಿಎಂ ಹಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿರುವ ರಾಮನಗರದಲ್ಲಿ ಜಿದ್ದಾಜಿದ್ದಿನ ಕದನಕ್ಕೆ ಮುನ್ನುಡಿ ಬರೆಯುವುದು ಖಚಿತ. ಇದಕ್ಕೆ ಇಂಬು ನೀಡುವಂತೆ ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಯೋಗೇಶ್ವರ್, ಎರಡು ಬಾರಿ ಸತತವಾಗಿ ಆಯ್ಕೆಯಾಗಿರುವ ಡಿ.ಕೆ. ಸುರೇಶ್ ಈ ಬಾರಿಯೂ ಗೆಲುವು ತಮ್ಮದೆಂದು ಹೇಳುತ್ತಿದ್ದಾರೆ. ಆದರೆ ಅವರ ಉದ್ಘಟತನಕ್ಕೆ ಅಂತ್ಯ ಹಾಡುವ ಸಮಯ ಇದೀಗ ಬಂದಿದೆ ಎಂದು ಹೇಳಿದ್ದಾರೆ.

ಹಣ ಬಲ, ತೋಳ್ಬಲದ ಸಹಾಯದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಡಿಕೆ ಸಹೋದರರು ಭಾವಿಸಿದ್ದಾರೆ. ಇದೇ ಕಾರಣಕ್ಕೆ ಸ್ವತಃ ಪ್ರಧಾನಿ ಮೋದಿಯೇ ಬಂದು ಸ್ಪರ್ಧಿಸಿದರೂ ಗೆಲುವು ತಮ್ಮದೇ ಎಂದು ಬೀಗುತ್ತಿದ್ದಾರೆ ಎಂದು ಯೋಗೇಶ್ವರ್ ಹರಿಹಾಯ್ದರು.

ಇನ್ನು ಚುನಾವಣೆಗೆ ಸ್ಪರ್ಧಿಸುವ ಕುರಿತು ಪ್ರತಿಕ್ರಿಯೆ ನೀಡಿದ ಯೋಗೇಶ್ವರ್, ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಗೆಲ್ಲುವುದು ಅಸಾಧ್ಯ ಎಂದು ತಮಗೆ ಗೊತ್ತಿದೆ. ತಮ್ಮನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ತಿರಸ್ಕರಿಸಿದ ಪರಿಣಾಮ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು.

ಅದಾಗ್ಯೂ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುವೆ, ಇಲ್ಲವಾದರೆ ಪಕ್ಷದ ಅಭ್ಯರ್ಥಿ ರುದ್ರೇಶ್ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಾಗಿ ಯೋಗೇಶ್ವರ್ ಸ್ಪಷ್ಟಪಡಿಸಿದರು.