ಬಾಗಲಕೋಟೆ[ಮಾ.25]: ಬಿಜೆಪಿಯಿಂದ ಪಿ.ಸಿ.ಗದ್ದಿಗೌಡರ ಹಾಗೂ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ್ ಅವರಿಗೆ ಟಿಕೆಟ್ ಅಂತಿಮವಾಗಿದೆ. ಪಿ.ಸಿ.ಗದ್ದಿಗೌಡರ 2004, 2009, 2014ರಲ್ಲಿ ಗೆಲವು ಕಂಡಿದ್ದು ಇದೀಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಾಗಲಕೋಟೆ ಲೋಕಸಭಾ ವ್ಯಾಪ್ತಿಯಲ್ಲಿ ಗದಗ ಜಿಲ್ಲೆಯ ನರಗುಂದ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳು ಇವೆ. ಜಮಖಂಡಿ ಮತ್ತು ಬಾದಾಮಿ ಹೊರತುಪಡಿಸಿದರೆ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಅವರ ಚುನಾವಣೆಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ರಾಜಕೀಯ ಕುಟುಂಬದ ಹಿನ್ನೆಲೆಯಿರುವ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ್ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಲೋಕಸಭೆಯ ವ್ಯಾಪ್ತಿಯ ಬಾದಾಮಿಯಿಂದ ಶಾಸಕರಾಗಿರುವುದರಿಂದ ಅವರು ಸಹ ಕಾಂಗ್ರೆಸ್ ಪಕ್ಷದ ಗೆಲವಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.