ಛಿಂದ್ವಾರಾ (ಮಧ್ಯಪ್ರದೇಶ): 7 ಹಂತಗಳ ಪೈಕಿ ಇನ್ನೂ 5 ಸ್ತರದ ಲೋಕಸಭೆ ಚುನಾವಣೆಯ ಮತದಾನ ಬಾಕಿ ಇರುವಾಗಲೇ ಕಾಂಗ್ರೆಸ್‌ ಸೋಲೊಪ್ಪಿಕೊಳ್ಳುವ ಧಾಟಿಯಲ್ಲಿ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಕಾಂಗ್ರೆಸ್‌ ಅತ್ಯುತ್ತಮ ಪ್ರದರ್ಶನ ತೋರಲಿದೆ. ಆದರೆ ಬಹುಮತ ಪಡೆಯುವ ಸಾಧ್ಯತೆ ಇಲ್ಲ. ದೆಹಲಿಯಲ್ಲಿ ಹೊಸ ಸರ್ಕಾರ ರಚಿಸಲು ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ಸಿಗರೂ ಆಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಭವಿಷ್ಯ ನುಡಿದಿದ್ದಾರೆ.

ಇದೇ ವೇಳೆ, ಬಿಜೆಪಿ ಕೂಡ ಅಧಿಕಾರಕ್ಕೇರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚುನಾವಣೆ ನಂತರ ಮೈತ್ರಿ ಏರ್ಪಡಬೇಕಾಗುತ್ತದೆ. ಸದ್ಯ ದೇಶದಲ್ಲಿ ಎರಡು ರೀತಿಯ ಮಾದರಿ ಇದೆ. ಒಂದು ಬಿಜೆಪಿ ವಿರೋಧಿ. ಮತ್ತೊಂದು ಬಿಜೆಪಿ ಪರ. ಬಿಜೆಪಿ ಪರ ಇರುವ ಪಕ್ಷಗಳ ಸಂಖ್ಯೆ ಕಡಿಮೆ ಇದೆ. ಹೆಚ್ಚಿನ ರಾಜಕೀಯ ಪಕ್ಷಗಳು ಬಿಜೆಪಿಗೆ ವಿರುದ್ಧವಾಗಿವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಸರ್ಕಾರ ರಚಿಸಿದರೆ ರಾಹುಲ್‌ ಗಾಂಧಿ ಅವರು ಪ್ರಧಾನಿಯಾಗುತ್ತಾರಾ ಎಂಬ ಪ್ರಶ್ನೆಗೆ, ನಮ್ಮ ಬಳಿ ಸಂಖ್ಯೆ ಇದ್ದರೆ ಖಂಡಿತಾ ರಾಹುಲ್‌ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ.

ನನ್ನ ಮಗ ಕೆಲಸ ಮಾಡದಿದ್ದರೆ ಬಟ್ಟೆಹರಿದುಬಿಡಿ: ಕಮಲ್‌

ಛಿಂದ್ವಾರಾ: ಮಧ್ಯಪ್ರದೇಶದ ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ 9 ಬಾರಿ ಆಯ್ಕೆಯಾಗಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಈ ಬಾರಿ ತಮ್ಮ ಕ್ಷೇತ್ರದಲ್ಲಿ ಪುತ್ರ ನಕುಲ್‌ ಅವರನ್ನು ಕಣಕ್ಕಿಳಿಸಿದ್ದಾರೆ. ‘ಜನಗಳ ಸೇವೆ ಮಾಡುವ ಹೊಣೆಯನ್ನು ನಕುಲ್‌ಗೆ ವರ್ಗಾಯಿಸಿದ್ದೇನೆ. ಆತನಿಂದ ಕೆಲಸ ಮಾಡಿಸಿ. ಮಾಡದೇ ಇದ್ದರೆ ಬಟ್ಟೆಹರಿದುಬಿಡಿ’ ಎಂದು 72 ವರ್ಷದ ಕಮಲ್‌ನಾಥ್‌ ಅವರು ಚುನಾವಣಾ ಪ್ರಚಾರ ವೇಳೆ ಸಲಹೆ ನೀಡಿದ್ದಾರೆ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28