ನವದೆಹಲಿ[ಮೇ.02]: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಚುನಾವಣಾ ರಣತಂತ್ರವನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಹಿರಂಗಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಮಹಾಗಠಬಂಧನ ಭಾಗ ಅಲ್ಲದೇ ಇದ್ದರೂ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಉದ್ದೇಶ. ಈ ಕಾರಣಕ್ಕಾಗಿಯೇ ನಾವು ಕೆಲವು ಕಡೆ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ ಎಂದು ಪ್ರಿಯಾಂಕಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ತಮ್ಮ ಪಕ್ಷದ ಗೆಲುವಿಗಿಂತ, ಬಿಜೆಪಿ ಸೋಲೇ ಮುಖ್ಯ ಎಂಬ ಸುಳಿವು ನೀಡಿದ್ದಾರೆ.

ಪ್ರಚಾರದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕಾ, ಕಾಂಗ್ರೆಸ್‌ನ ದುರ್ಬಲ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಸೆಳೆಯುವ ಮೂಲಕ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಮೈತ್ರಿಕೂಟಕ್ಕೆ ನೆರವಾಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗೆಂದು ನಾವು ಎಲ್ಲಾ ಕಡೆಯಲ್ಲೂ ದುರ್ಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿಲ್ಲ. ಪೂರ್ವ ಉತ್ತರ ಪ್ರದೇಶದಲ್ಲಿ ಒಬ್ಬನೇ ಒಬ್ಬ ದುರ್ಬಲ ಅಭ್ಯರ್ಥಿ ಇಲ್ಲ. ಆಯ್ಕೆ ಆದ ಅಭ್ಯರ್ಥಿಗಳು ಬಿಜೆಪಿಯ ಮತಗಳನ್ನು ಕಸಿಯಬಲ್ಲರು ಎನ್ನುವುದನ್ನು ತಾವೇ ಖುದ್ದು ಖಾತರಿಪಡಿಸಿಕೊಂಡಿರುವುದಾಗಿಯೂ ಹೇಳಿದ್ದಾರೆ.

ನಾವು ಅಭ್ಯರ್ಥಿಗಳನ್ನು ಜಾಗರೂಕತೆಯಿಂದ ಆಯ್ಕೆ ಮಾಡಿದ್ದೇವೆ. ಟಿಕೆಟ್‌ ಹಂಚಿಕೆ ವೇಳೆ ಒಂದೋ ಕಾಂಗ್ರೆಸ್‌ ಗೆಲ್ಲಬೇಕು ಇಲ್ಲವೇ ಬಿಜೆಪಿಯ ಮತಗಳನ್ನು ಸೆಳೆಯಬೇಕು ಎಂಬ ಮಾನದಂಡವನ್ನು ಅನುಸರಿಸಲಾಗಿದೆ. ಮಹಾಗಠಬಂಧನದ ಮತಗಳನ್ನು ಕಾಂಗ್ರೆಸ್‌ ಕಡಿಮೆ ಮಾಡುತ್ತಿಲ್ಲ ಎಂದು ಪ್ರಿಯಾಂಕಾ ಹೇಳಿಕೆ ನೀಡಿದ್ದಾರೆ.