ನವದೆಹಲಿ[ಮಾ.20]: ದಿಲ್ಲಿಯಲ್ಲಿ ಬಿಜೆಪಿ ಮತ್ತೆ ಏಳಕ್ಕೆ ಏಳೂ ಸ್ಥಾನಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿದೆ ಎಂಬ ಸಮೀಕ್ಷೆಗಳ ಭವಿಷ್ಯದಿಂದ ಆತಂಕಿತಗೊಂಡಿರುವಂತೆ ಕಂಡುಬರುತ್ತಿರುವ ಕಾಂಗ್ರೆಸ್‌ ಪಕ್ಷ ಈಗ ಮತ್ತೆ ತನ್ನ ಕಡುವೈರಿ ಆಮ್‌ ಆದ್ಮಿ ಪಕ್ಷ (ಆಪ್‌) ಜತೆ ಮೈತ್ರಿ ಮಾಡಿಕೊಳ್ಳುವ ಒಲವು ವ್ಯಕ್ತಪಡಿಸಿದೆ.

ಇತ್ತೀಚೆಗೆ ಆಪ್‌ ಜತೆ ಮೈತ್ರಿಗೆ ಕಾಂಗ್ರೆಸ್‌ ಖಡಾಖಂಡಿತವಾಗಿ ನಿರಾಕರಿಸಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಹೊಂದಾಣಿಕೆಗೆ ಕಾಂಗ್ರೆಸ್‌ ಮುಂದಾಗಿದೆ. ಇದಕ್ಕೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಮಧ್ಯಸ್ಥಿಕೆ ವಹಿಸಿದ್ದು, ಆಪ್‌ ಮುಖಂಡ ಸಂಜಯ ಸಿಂಗ್‌ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ವೇಳೆ, ಕಾಂಗ್ರೆಸ್‌ ನಾಯಕರು ಕೂಡ ಆಪ್‌ ನಾಯಕತ್ವದ ಜತೆ ಹಿಂಬಾಗಿಲ ಮಾತುಕತೆ ನಡೆಸುತ್ತಿದ್ದು ಮೈತ್ರಿಗೆ ಕಸರತ್ತು ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

‘ಮೋದಿ ಸರ್ಕಾರದಿಂದ ದೇಶಕ್ಕೆ, ಸಂವಿಧಾನಕ್ಕೆ ಹಾಗೂ ಪ್ರಜಾಸತ್ತೆಗೆ ಅಪಾಯ ಕಾದಿದೆ. ಹೀಗಾಗಿ ದೇಶ ರಕ್ಷಣೆಗೆ ಮೊದಲ ಆದ್ಯತೆ ನೀಡಿ ವಿಪಕ್ಷಗಳ ಒಗ್ಗೂಡಿವಿಕೆಗೆ ಯತ್ನ ನಡೆಯುತ್ತಿದೆ. ನಂತರ ನಮ್ಮ ಪಕ್ಷದ ರಕ್ಷಣೆ ವಿಚಾರ’ ಎಂದು ಆಪ್‌ ನಾಯಕ ಸಂಜಯ್‌ ಸಿಂಗ್‌ ಸುದ್ದಿಗಾರರಿಗೆ ಹೇಳಿದರು.

ಆದರೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿರುವ ಆಪ್‌ನ ಇನ್ನೊಬ್ಬ ಮುಖಂಡ ಗೋಪಾಲ್‌ ರಾಯ್‌, ‘ಕಾಂಗ್ರೆಸ್‌ ಜತೆ ಯಾವುದೇ ಮೈತ್ರಿ ಇಲ್ಲ. ಆಪ್‌ ಏಕಾಂಗಿ ಸ್ಪರ್ಧೆ ಮಾಡಲಿದೆ’ ಎಂದರು.

ಈ ನಡುವೆ ಆಪ್‌ ಜೊತೆ ಮೈತ್ರಿಗೆ ವಿರೋಧ ಹೊಂದಿರುವ ದೆಹಲಿ ಕಾಂಗ್ರೆಸ್‌ ಅಧ್ಯಕ್ಷೆ ಶೀಲಾ ದೀಕ್ಷಿತ್‌, ದಿಲ್ಲಿ ಕಾಂಗ್ರೆಸ್‌ ನಾಯಕರ ತುರ್ತು ಸಭೆ ಕರೆದಿದ್ದಾರೆ.