ಉಡುಪಿ, [ಮಾ.28]: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ, ಎಐಸಿಸಿ ಸದಸ್ಯ ಅಮೃತ್ ಶೆಣೈ ತಮ್ಮ ಚುನಾವಣಾ ಖರ್ಚಿಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಗುರುವಾರ ಮತಯಾಚನೆ ನಡೆಸಿದರು. 
 
ಅಮೃತ್ ಶೆಣೈ ಅವರನ್ನು ಬೆಂಬಲಿಸುತ್ತಿರುವ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರು 10 ಸಾವಿರ ರು. ದೇಣಿಗೆ ನೀಡುವ ಮೂಲಕ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಚುನಾವಣೆ ಎಂದರೇ ಹಣದ ವ್ಯವಹಾರ ಆಗಿರುವ ಈ ಕಾಲದಲ್ಲಿ ಜನರ ಹಣದಿಂದಲೇ ಜನರಿಗಾಗಿ ಸ್ಪರ್ಧಿಸುವ ಈ ಆದರ್ಶ ಪ್ರಜಾಪ್ರಭುತ್ವದ ಉಳಿವಿಗಾಗಿ ಉಡುಪಿಯಿಂದ ಆರಂಭವಾಗಿದೆ ಎಂದರು. 

ಅಭ್ಯರ್ಥಿ ಅಮೃತ ಶೆಣೈ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ನ ಕಾರ್ಯಕರ್ತರ ವಿರೋಧಿ ನಿರ್ಧಾರವನ್ನು ವಿರೋಧಿಸುವುದಕ್ಕಾಗಿ ನಾನು, ನನ್ನ ರಾಜಕೀಯ ಭವಿಷ್ಯವನ್ನು ಪಣವಾಗಿಟ್ಟುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ. 

ಟಿಕೇಟಿಗಾಗಿ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿರುವ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಭ್ಯರ್ಥಿಯಾಗಿರುವುದಕ್ಕೆ ಕಾಂಗ್ರೆಸ್ಸಿನವರಿಗೆ ಬೇಸರವಿದೆ. ಈಗಲೂ ಪ್ರಮೋದ್ ಅವರ ಮೇಲೆ ನಾನು ಯಾವುದೇ ಆರೋಪ ಅಥವಾ ವೈಯುಕ್ತಿಕ ಟೀಕೆಯನ್ನು ನಾನು ಮಾಡುವುದಿಲ್ಲ ಎಂದರು.

ಬಿಗ್ ಬಜಾರ್ ನಿಂದ ಉಡುಪಿ ಕೆಎಂ ಮಾರ್ಗದವರೆಗೆ ಸಂಚರಿಸಿದ ಈ ಪಾದಯಾತ್ರೆಯನ್ನು ಕುತೂಹಲದಿಂದ ವೀಕ್ಷಿಸಿದ ಸಾರ್ವಜನಿಕರು ಹತ್ತಿಪ್ಪತ್ತು ರು.ಗಳಿಂದ ನೂರಿನ್ನೂರು ರು.ಗಳವರೆಗೂ ದೇಣಿಗೆ ನೀಡಿದರು. 

  ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಯೋಗೀಶ್ ಶೇಟ್, ಸಮಾಜಸೇವಕಿ ಜಯಶ್ರೀ ಭಟ್, ಯಜ್ಞೇಶ್ ಆಚಾರ್ಯ, ಕಿಶೋರ್ ಶೆಟ್ಟಿ, ಅನಿತಾ ಡಿಸಿಲ್ವ ಮೊದಲಾದವರು ಅಮೃತ್ ಶೆಣೈ ಅವರೊಂದಿಗೆ ಹೆಜ್ಜೆ ಹಾಕಿದರು.