ಶಿಮ್ಲಾ: 2019ರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳಿಗೆ ಬಹುಮತ ಬರುವುದಿಲ್ಲ ಎಂಬ ಲೆಕ್ಕಾಚಾರಗಳು ನಡೆಯುತ್ತಿರುವಾಗಲೇ, ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಹೊರತಾಗಿಯೂ ಪ್ರಧಾನಿ ಸ್ಥಾನಕ್ಕೆ ಯಾವುದೇ ಪ್ರಾದೇಶಿಕ ಪಕ್ಷದ ನಾಯಕರ ಆಯ್ಕೆಗೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರು ಹೇಳಿದ್ದಾರೆ. 

ಈ ಮೂಲಕ ಬಿಜೆಪಿ ಬಹುಮತದಿಂದ ಕುಸಿತವಾದರೆ, ಪ್ರಾದೇಶಿಕ ಪಕ್ಷಗಳ ಜೊತೆಗೂಡಿ ಸರ್ಕಾರ ರಚಿಸಲಾಗುತ್ತದೆ ಎಂಬ ಸುಳಿವು ನೀಡಿದ್ದಾರೆ. ಈ ಬಗ್ಗೆ ಗುರುವಾರ ಶಿಮ್ಲಾದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಜಾದ್‌ ಅವರು, ‘ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಪ್ರಧಾನಿ ಪಟ್ಟಪ್ರಾದೇಶಿಕ ಪಕ್ಷದ ನಾಯಕರಿಗೆ ತ್ಯಾಗ ಮಾಡಲು ಸಿದ್ಧ,’ ಎಂದಿದ್ದಾರೆ.

ಆದರೆ, ಇದಕ್ಕೆ ಭಿನ್ನರಾಗ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು, ‘ಚುನಾವಣಾ ಫಲಿತಾಂಶದ ಬಳಿಕ ಸ್ವಾಭಾವಿಕವಾಗಿ ಅತಿದೊಡ್ಡ ಪಕ್ಷವೇ ದೇಶ ಮುನ್ನಡೆಸುವ ಅವಕಾಶ ಪಡೆಯಲಿದೆ,’ ಎಂದು ಹೇಳಿದ್ದಾರೆ.