ಬೆಳಗಾವಿ :  ಸಚಿವ ಸಂಪುಟದಿಂದ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಗೋಕಾಕ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಈ ಲೋಕಸಭಾ ಚುನಾವಣಾ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ಬೆಳಗಾವಿ ವ್ಯಾಪ್ತಿಯ ಪ್ರಭಾವಿ ನಾಯಕನ ಈ ತಟಸ್ಥ ನಡೆ ಅವರ ಬೆಂಬಲಿಗರಲ್ಲಿ ತಳಮಳ ಸೃಷ್ಟಿಸಿದೆ. ಕಾಂಗ್ರೆಸ್‌ಗೂ ತಲೆನೋವಾಗಿ ಪರಿಣಮಿಸುತ್ತಿದೆ.

ರಮೇಶ ಜಾರಕಿಹೊಳಿ ಸೇರಿ ನಾಲ್ವರು ಕಾಂಗ್ರೆಸ್‌ ಶಾಸಕರು ಮುಂಬೈಗೆ ತೆರಳಿ, ಮೈತ್ರಿ ಸರ್ಕಾರದ ಅಸ್ತಿತ್ವವನ್ನೇ ನಡುಗಿಸಿದ್ದರು. ಒಂದು ಹಂತದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೂ ಸಿದ್ಧತೆ ನಡೆಸಿದ್ದರು. ಆರು ತಿಂಗಳಿಂದ ಪಕ್ಷದ ಸಭೆ, ಸಮಾರಂಭಗಳಿಂದ ಅಂತರ ಕಾಯ್ದುಕೊಂಡಿರುವ ಅವರು ಇತ್ತೀಚೆಗೆ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಿಂದಲೂ ದೂರವುಳಿದಿದ್ದರು.

ಬೆಳಗಾವಿಯಲ್ಲಿ ಬಿಜೆಪಿ ಪ್ರಬಲವಾಗುತ್ತಿದ್ದು, ಇಂಥ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ಸೂಕ್ತ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಕಾಂಗ್ರೆಸ್‌ ತೊಡಗಿದೆ. ಹೊಸ ಮುಖಕ್ಕೆ ಅವಕಾಶ ಕೊಡುವ ಪ್ರಯತ್ನಗಳೂ ನಡೆಯುತ್ತಿದೆ. ಆದರೆ ರಮೇಶ ಜಾರಕಿಹೊಳಿ ಮುನಿಸು ಪಕ್ಷಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ.

ಈ ಭಾಗದ ಪ್ರಭಾವಿ ರಾಜಕಾರಣಿಯಾಗಿರುವ ರಮೇಶ ಜಾರಕಿಹೊಳಿ ಗೋಕಾಕ, ಅರಬಾವಿ, ಸವದತ್ತಿ, ಅಥಣಿ, ಕಾಗವಾಡ ಕ್ಷೇತ್ರಗಳ ಮೇಲೆ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿಯಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಶಾಸಕ ರಾಜು ಕಾಗೆ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಈ ಭಾಗದಲ್ಲಿ ಪಕ್ಷದ ಸಂಘಟನೆಯನ್ನೂ ಬಲಗೊಳಿಸಿದ್ದರು. ಆದರೆ, ಈಗ ಮಹತ್ವದ ಚುನಾವಣೆ ವೇಳೆ ಅವರು ಮೌನಕ್ಕೆ ಶರಣಾಗಿರುವುದು ಜಿಲ್ಲಾ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಸಿದೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಇತ್ತೀಚೆಗಷ್ಟೇ ನಡೆದ ಪಕ್ಷದ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರ ಸಭೆ ಕರೆದಿದ್ದರು. ಆ ಸಭೆಗೂ ರಮೇಶ ಜಾರಕಿಹೊಳಿ ಗೈರಾಗಿದ್ದರು. ಹಾಲಿ ಬಿಜೆಪಿ ಸಂಸದ ಸುರೇಶ ಅಂಗಡಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಬೇಕಿದ್ದರೆ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ವೈಮನಸ್ಸು ಮರೆತು ಒಂದಾಗಿ ಹೋರಾಟಲೇ ಬೇಕಾದ ಅನಿವಾರ್ಯ ಸ್ಥಿತಿ ಇದೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರೂ ರಮೇಶ ಜಾರಕಿಹೊಳಿ ತಟಸ್ಥ ನಿಲುವು ಗೊಂದಲ ಮೂಡಿಸಿದೆ. ತಮ್ಮ ನಾಯಕನೇ ತಟಸ್ಥ ನಿಲುವು ಪ್ರದರ್ಶಿಸುತ್ತಿರುವ ಹೊತ್ತಿನಲ್ಲಿ ಅವರ ಬೆಂಬಲಿಗರು ಕೂಡ ಆಸಕ್ತಿಯಿಂದ ಪ್ರಚಾರಕ್ಕಿಳಿಯುವುದು ಅನುಮಾನ. ಚುನಾವಣೆಗಿನ್ನು ಕೆಲವೇ ದಿನಗಳು ಇದೆ ಎನ್ನುವಾಗ ಕಾಂಗ್ರೆಸ್‌ನೊಳಗಿನ ಈ ಗೊಂದಲ ಪಕ್ಷಕ್ಕೆ ಹಿನ್ನಡೆಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಕೆಲ ಕಾರ್ಯಕರ್ತರು.

ವರದಿ :  ಶ್ರೀಶೈಲ ಮಠದ