ಬೆಂಗಳೂರು :  ಪ್ರಧಾನಿ ನರೇಂದ್ರ ಮೋದಿಯದ್ದು ನಕಲಿ ಹಿಂದುತ್ವ, ಮೋದಿ ಅವರಿಗೆ ಹಿಂದುತ್ವದ ಬಗ್ಗೆ, ಗೋವಿನ ಬಗ್ಗೆ ನಿಜವಾದ ಪ್ರೀತಿ ಇದ್ದರೆ ದೇಶದಿಂದ ನಡೆಯುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು, ಹಾಗೂ ಮೋದಿ ಹಿಂದುತ್ವದ ಬಗ್ಗೆ ಮಾತಾಡ್ತಾರೆ. ಭಾರತ ಗೋ ಮಾಂಸ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ 26 ಸಾವಿರ ಕೋಟಿ ಟನ್‌ ಗೋ ಮಾಂಸವನ್ನ ಭಾರತ ರಫ್ತು ಮಾಡುತ್ತಿದೆ. ಮೋದಿ ಅವರಿಗೆ ಗೋ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಗೋ ಮಾಂಸ ರಫ್ತನ್ನ ನಿಲ್ಲಿಸಿ ಗೋ ಹತ್ಯೆ ತಡೆಯಲಿ ಎಂದರು.

ರಾಹುಲ್‌ ಗಾಂಧಿ ಅವರ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ನುಸುಳಿ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ನಮಗೂ ಬಿಜೆಪಿ ಕಾರ್ಯಕ್ರಮಕ್ಕೆ ನುಗ್ಗಿ ರಾಹುಲ್‌ಗಾಂಧಿ ಅವರ ಹೆಸರು ಕೂಗಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಮಾನ್ಯತಾ ಟೆಕ್‌ ಪಾರ್ಕ್ನಲ್ಲಿ ನಡೆದ ಲಾಠಿ ಚಾರ್ಜ್ ಲ್ಲಿ ಬಿಜೆಪಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ ಅವರು, ಸ್ಟಾರ್ಟ್‌ ಅಪ್‌ ಉದ್ಯಮಿಗಳ ಜೊತೆ ನಡೆದ ಸಂವಾದದಲ್ಲಿ ಟೆಕ್ಕಿಗಳ ವೇಷದಲ್ಲಿ ಬಿಜೆಪಿ ಕಾರ್ಯಕರ್ತರು ಬಂದು ಮೋದಿ ಅವರ ಹೆಸರು ಕೂಗಿದ್ದಾರೆ. ಇದು ಸರಿಯಲ್ಲ. ರಾಜ್ಯಕ್ಕೆ ಪ್ರಧಾನಿ ಮೋದಿ ಅವರೂ ಬರುತ್ತಾರೆ. ಆಗ ರಾಹುಲ್‌ ರಾಹುಲ್‌ ಅಂತ ಕೂಗೋಕೆ ಆಗಬೇಕಾ? ಬಿಜೆಪಿ ಕಾರ್ಯಕರ್ತರಿಗೆ ಮೋದಿ, ಅಮಿತ್‌ ಶಾ ಬುದ್ಧಿ ಹೇಳಲಿ ಎಂದರು.