ನಾಗಮಂಗಲ[ಮಾ.13]: ಕಾಂಗ್ರೆಸ್‌ನವರಾದ ನಾವು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಮತ ಕೇಳಲು ಹೋದರೆ ಕಾಂಗ್ರೆಸ್‌ನವರೇ ಹೊಡೆದು ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಾಗಮಂಗಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಪ್ರಸನ್ನ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ ಎಂಬುದನ್ನು ಮರೆತಿರುವ ಜೆಡಿಎಸ್‌ ಪಕ್ಷದವರು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಈಗ ನಾವು ಜೆಡಿಎಸ್‌ ಅಭ್ಯರ್ಥಿ ಪರ ಮತ ಕೇಳಲು ಹೋದರೆ ಹೊರಗಿನ ಅಭ್ಯರ್ಥಿ(ನಿಖಿಲ್‌ ಕುಮಾರಸ್ವಾಮಿ) ಪರ ಮತಯಾಚನೆ ಮಾಡಲು ಬಂದರೆ ಹೊಡೆದು ಕಳುಹಿಸುತ್ತೇವೆ ಎಂದು ನಮ್ಮ ಪಕ್ಷದ ಕಾರ್ಯಕರ್ತರೇ ಹೆದರಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಹೈಕಮಾಂಡ್‌ ಆದೇಶಕ್ಕೆ ನಾವು ತಲೆಬಾಗಿ ತೆಪ್ಪಗಿರಬೇಕೇ ಹೊರತು. ಅದನ್ನು ಬಿಟ್ಟು ಜೆಡಿಎಸ್‌ ಪಕ್ಷದ ಅಭ್ಯರ್ಥಿ ಪರ ಹಳ್ಳಿಗಳಲ್ಲಿ ಮತ ಕೇಳಲು ಹೋಗಲ್ಲ ಎಂದರು.

ಕಾಂಗ್ರೆಸ್‌ನ ಎಲ್ಲ ಕಾರ್ಯಕರ್ತರು ಅಂಬರೀಷ್‌ ಅಭಿಮಾನಿಗಳ ಜೊತೆ ಸೇರಿಕೊಂಡಿದ್ದಾರೆ. ಕೊನೆಕ್ಷಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್‌ ಅವರೇ ಕಣಕ್ಕಿಳಿಯಬಹುದೆಂದು ಈಗಲೂ ನಮಗೆ ವಿಶ್ವಾಸವಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಂಬರೀಷ್‌ ಮೇಲೆ ಅಪಾರವಾದ ಪ್ರೀತಿ ಗೌರವವಿದೆ. ಹಿಂದೊಮ್ಮೆ ಕುಣಿಗಲ್‌ ಮತ್ತು ಮದ್ದೂರಿನಲ್ಲಿ ಅಭ್ಯರ್ಥಿಗೆ ಸಿ.ಫಾರಂ ಕೊಟ್ಟಿರುವಂತೆ, ಪಕ್ಷದ ಬಿ.ಫಾರಂ ಬೇರೆ ಅಭ್ಯರ್ಥಿಗೆ ಸಿಕ್ಕರೂ ಸುಮಲತಾ ಅಂಬರೀಷ್‌ ಅವರಿಗೆ ಸಿ.ಫಾರಂ ಕೊಟ್ಟರೂ ಕೊಡಬಹುದು ಎಂದು ತಿಳಿಸಿದರು.