ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಹಾಗೂ ಹಾಲಿ ಸಂಸದ ಡಿ.ಕೆ.ಸುರೇಶ್‌ ಬುಧವಾರ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. 

ದೇವೇಗೌಡರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇವೇಗೌಡರ ಆಶೀರ್ವಾದ ಪಡೆದು ಅವರ ಬೆಂಬಲ, ಸಹಕಾರ ಕೋರಲು ಬಂದಿದ್ದೆ.  ನಾನು ಪ್ರತಿನಿಧಿಸುತ್ತಿರುವ ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧೆಗೆ ಪಕ್ಷದಿಂದ ಟಿಕೆಟ್‌ ದೊರೆಯುವ ವಿಶ್ವಾಸವಿದೆ. ಹಾಗಾಗಿ ನನ್ನ ಪರ ಚುನಾವಣಾ ಪ್ರಚಾರಕ್ಕೆ ಬರಲು ದೇವೇಗೌಡರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದರು.

ಬೆಂ.ಗ್ರಾಮಾಂತರದಲ್ಲಿ ತಮಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಸ್ವರ್ಧೆಸುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ದೇವರು ಒಳ್ಳೆಯದು ಮಾಡಲಿ. ಅವರು ಚುನಾವಣೆಗೆ ನಿಂತ್ರೆ ಬೇಡ ಅನ್ನೋಕೆ ಆಗುತ್ತಾ? ಯಾರು ಕೆಲಸ ಮಾಡಿದ್ದಾರೆ, ಯಾರು ಸುಳ್ಳು ಹೇಳಿದ್ದಾರೆ ಎಂದು ಜನರು ನೋಡುತ್ತಾರೆ. ಫಲಿತಾಂಶ ಬಂದ ದಿನ ಎಲ್ಲಾ ಗೊತ್ತಾಗುತ್ತೆ ಬಿಡಿ ಎಂದರು.

ಹಾಸನ ಮತ್ತು ಮಂಡ್ಯದಲ್ಲಿ ಪಕ್ಷದ ಮುಖಂಡರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿ, ಕೆಲವೆಡೆ ಸ್ವಲ್ಪ ಸಮಸ್ಯೆ ಇದೆ. ಪಕ್ಷವನ್ನು ಅಧಿಕಾರಕ್ಕೆ ತರುವ ದೃಷ್ಟಿಯಿಂದ ಒಟ್ಟಾಗಿ ಹೋಗುವಂತೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸಣ್ಣಪುಟ್ಟಗೊಂದಲ ಸರಿಪಡಿಸಿಕೊಂಡು ಚುನಾವಣೆ ಎದುರಿಸಲಾಗುವುದು ಎಂದರು.