ಬಾಗಲಕೋಟೆ(ಏ.11): ಇದೇ ಏ.18ರಂದು ಪ್ರಧಾನಿ ನರೇಂದ್ರ ಮೋದಿ ಬಾಗಲಕೋಟೆಗೆ ಆಗಮಿಸಲಿದ್ದು, ಮೋದಿ ಬರಲಿರುವ ಸ್ಥಳದಲ್ಲಿ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಆದರೆ ಇದಕ್ಕೆ ಟಾಂಗ್ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ, ಚರಂತಿಮಠ ಮೋದಿ ದಫನ್(ಅಂತ್ಯಸಂಸ್ಕಾರ) ಸ್ಥಳಕ್ಕೆ ಗುದ್ದಲಿಪೂಜೆ ಮಾಡಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಇಬ್ರಾಹಿಂ, ಮೋದಿ ಅವರನ್ನು ದಫನ್ ಮಾಡಲು ಸ್ಥಳ ಗುರುತಿಸಿದ್ದಕ್ಕೆ ಚರಂತಿಮಠ ಅವರಿಗೆ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದ ಇಬ್ರಾಹಿಂ, ಮೋದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಘೋಷಿಸಿದರು.

"

ಪ್ರಧಾನಿ ಮೋದಿ ಅವರಿಗಿಂತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ದೊಡ್ಡ ಹಿಂದೂ ಎಂದ ಇಬ್ರಾಹಿಂ, ದೇವೇಗೌಡರು ದಿನಕ್ಕೆ 4 ಗಂಟೆ ಮತ್ತು ಅವರ ಪತ್ನಿ ದಿನಕ್ಕೆ 8 ಗಂಟೆ ಪೂಜೆ ಮಾಡುತ್ತಾರೆ ಎಂದು ಹೇಳಿದರು.

ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಪ್ರಧಾನಿ ಮೋದಿ ಅವರಷ್ಟು ಸುಳ್ಳುಗಾರ ಪ್ರಧಾನಿಯನ್ನು ತಾವು ಇದುವರೆಗೂ ಕಂಡಿಲ್ಲ ಎಂದು ಇಬ್ರಾಹಿಂ ಕಿಡಿಕಾರಿದರು.

ಕಾಶ್ಮೀರದಲ್ಲಿ ದೇವೇಗೌಡರನ್ನು ‘ದೇವ್ ಕಾ ಗೋಡಾ’(ದೇವರ ಕುದುರೆ)ಎಂದೇ ಕರೆಯುತ್ತಾರೆ ಎಂದ ಇಬ್ರಾಹಿಂ. ಇಂತಹ ವ್ಯಕ್ತಿ ದೇಶದ ಲೋಕಸಭೆಯಲ್ಲಿರಬೇಕು ಎಂದು ಹೇಳಿದರು.

ಪ್ರಧಾನಿ ಮೋದಿ 10 ಲಕ್ಷ ರೂ. ಸೂಟು ಧರಿಸಿ ಮೆರೆದಾಡುತ್ತಾರೆ, ಆದರೆ ದೇವೇಗೌಡರು ಧರಿಸುವ ಬಟ್ಟೆಯ ಬೆಲೆ ಕೇವಲ 300 ರೂ. ಎಂದು ಇಬ್ರಾಹಿಂ ಹೇಳಿದರು.