ಬೆಂಗಳೂರು :  ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ 20ಕ್ಕೂ ಹೆಚ್ಚು ಸ್ಥಾನ ಲಭಿಸಲಿವೆ. ದೇಶಾದ್ಯಂತ ಬದಲಾವಣೆ ಉಂಟಾಗಿದ್ದು, ನರೇಂದ್ರ ಮೋದಿಯವರ ನಾಟಕ ಮೇ 23ರಂದು ಕೆಲಸ ಮಾಡುವುದಿಲ್ಲ. ಹೀಗಾಗಿ ಮೇ 23ರಂದು ನಮ್ಮೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಶನಿವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 23ರಂದು ಕಾಂಗ್ರೆಸ್‌ ಮೈತ್ರಿಕೂಟದ ಗೆಲುವು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ನರೇಂದ್ರ ಮೋದಿ ಈವರೆಗೂ ಉದ್ಯೋಗ ಸೃಷ್ಟಿಸೇರಿದಂತೆ ಯಾವುದೇ ವಿಚಾರಕ್ಕೂ ಸ್ಪಂದಿಸಿಲ್ಲ. ಹೀಗಾಗಿ ಜನರು ಬದಲಾವಣೆ ಬಯಸಿದ್ದು, ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಗಲುಗನಸು :  ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳುತ್ತದೆ ಎಂಬುದು ಬಿಜೆಪಿಯವರ ಹಗಲುಗನಸು. ಸರ್ಕಾರವನ್ನು ಉರುಳಿಸಲು ಪ್ರಜಾಪ್ರಭುತ್ವ ವಿರೋಧಿಗಳಾಗಿ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. 20 ಶಾಸಕರು ನಮ್ಮೊಂದಿಗಿದ್ದಾರೆ ಎನ್ನುವ ಬಿಜೆಪಿಯವರ ಭ್ರಮೆಗೆ ಮೇ 23ರಂದು ಸೂಕ್ತ ಉತ್ತರ ಸಿಗುತ್ತದೆ. ಮೇ 23ರಂದು ನಮ್ಮ ಜತೆ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಎಂದು ಸುದ್ದಿಗಾರರಿಗೆ ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ ಸೋಲುತ್ತಾರೆ ಎಂದು ಹೇಳುವ ಬಿ.ಎಸ್‌.ಯಡಿಯೂರಪ್ಪ ಅವರೇ ಅತಿ ಹೆಚ್ಚು ಕೆಟ್ಟಪರಿಣಾಮ ಎದುರಿಸುತ್ತಾರೆ ಎಂದು ಎಚ್ಚರಿಸಿದರು.

ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ನಾನು ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.

ವರದಿ ಪ್ರಕಾರ 20 ಸ್ಥಾನ ಖಚಿತ:  ಕೆಪಿಸಿಸಿಯಲ್ಲಿ ನಡೆದ ಸಭೆಯಲ್ಲಿ ಸಚಿವರಿಂದ ಲೋಕಸಭೆ ಚುನಾವಣೆ ಬಗ್ಗೆ ವರದಿ ಪಡೆದಿದ್ದೇವೆ. ವರದಿ ಪ್ರಕಾರ ಕಾಂಗ್ರೆಸ್‌-ಜೆಡಿಎಸ್‌ ಸೇರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಮೋದಿಯವರ ಆರ್ಭಟ ಹಾಗೂ ಸುಳ್ಳಿನ ಪ್ರಚಾರಕ್ಕೆ ಈ ಚುನಾವಣೆ ಇತಿಶ್ರೀ ಹಾಡಲಿದೆ. ದೇಶದಲ್ಲಿ ಐದು ವರ್ಷ ನಡೆಸಿದ ಕೆಟ್ಟಆಡಳಿತಕ್ಕೆ ತಳಮಟ್ಟದಲ್ಲಿ ಜನ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.

ರಮೇಶ್‌ ಜಾರಕಿಹೊಳಿ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಮೇಶ್‌ ಜಾರಕಿಹೊಳಿ ಎಲ್ಲೂ ಹೋಗುವುದಿಲ್ಲ. ಅವರ ಬಗ್ಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ ಎಂದರು.