ನವದೆಹಲಿ[ಏ.24]: ಸ್ಯಾಂಡಲ್‌ವುಡ್‌ ನಟಿ, ಮಾಜಿ ಸಂಸದೆ ಹಾಗೂ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ದಿವ್ಯಾ ಸ್ಪಂದನಾ ಅಲಿಯಾಸ್‌ ರಮ್ಯಾ ಅವರು ಲೋಕಸಭಾ ಚುನಾವಣೆಯಲ್ಲಿಯೂ ಮತ ಹಕ್ಕು ಚಲಾಯಿಸಿದೇ ಇರುವುದು ಸಾಕಷ್ಟುಟ್ರೋಲ್‌ ಆಹಾರವಾಗಿದೆ.

ಒಂದೆಡೆ ಎಲ್ಲರೂ ಮತದಾನ ಮಾಡಬೇಕೆಂದು ಕರೆಕೊಡುವ ರಮ್ಯಾ, ತಾವೇ ಸತತ ಮೂರು ಚುನಾವಣೆಗಳಲ್ಲಿ ಮತ ಚಲಾಯಿಸದೇ ಗೈರಾಗಿರುವುದಕ್ಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ರಮ್ಯಾ ಅಲಿಯಾಸ್‌ ದಿವ್ಯಾ ಸ್ಪಂದನಾ ಅವರು ಮಂಡ್ಯದಲ್ಲಿ ಮತದಾನ ಮಾಡಬೇಕಿತ್ತು. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಮತ್ತು ಬಿಜೆಪಿ ನಾಯಕರನ್ನು ಟೀಕಿಸುವ ರಮ್ಯಾ ಅವರು ಮತದಾನ ಮಾಡಿಲ್ಲ. ಈ ಮೂಲಕ ರಮ್ಯಾ ಅವರು ಲೋಕಸಭಾ ಉಪ ಚುನಾವಣೆ, ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆ ಸೇರಿ 3 ಬಾರಿ ಮತದಾನ ಮಾಡಲು ವಿಫಲವಾದಂತಾಗಿದೆ.

ಹೀಗಾಗಿ, ಬಿಜೆಪಿ ನಾಯಕ ಸುರೇಶ್‌ ಕುಮಾರ್‌ ಅವರು, ‘ರಮ್ಯಾ ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ,’ ಎಂದು ಕಾಲೆಳೆದಿದ್ದಾರೆ. ಅಲ್ಲದೆ, ರಮ್ಯಾ ಅವರು ಮತದಾನ ಮಾಡಿದ್ದಾರೆಯೇ ಎಂಬುದನ್ನು ನಾನು ಖಚಿತಪಡಿಸಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಆಕೆ ರಾಜಕೀಯ ಮತ್ತು ಸಂವಿಧಾನ ಬಗ್ಗೆ ಮಾತನಾಡಲು ಅರ್ಹಳಾಗುತ್ತಾಳೆ ಎಂದು ಮತ್ತೊಬ್ಬ ಟ್ವೀಟಿಗರು ರಮ್ಯಾ ಅವರಿಗೆ ಟಾಂಗ್‌ ನೀಡಿದ್ದಾರೆ. ಈ ರೀತಿ ಹಲವು ಟ್ವೀಟಿಗರು ರಮ್ಯಾ ಅವರನ್ನು ಟ್ರೋಲ್‌ ಮಾಡಿದ್ದಾರೆ.