ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಬೆಂಗಳೂರಿಗೆ ಪ್ರಧಾನಿ ಮೋದಿ| ಪ್ರಧಾನಿ ಮೋದಿ ಅವರಿಗೆ ಸ್ವಾಗತ ಕೋರಿದ ಕೃಷ್ಣಭೈರೇಗೌಡ| ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ| 7 ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿ ಮೋದಿಗೆ ಆಗ್ರಹ| 2014ರ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ನಗರ ಅಭಿವೃದ್ಧಿಗಾಗಿ ಬಿಜೆಪಿ ಪ್ರಣಾಳಿಕೆ| 'ನಗರ ಅಭಿವೃದ್ಧಿಗಾಗಿ ನೀಡಿದ್ದ ಒಂದೇ ಒಂದು ಭರವಸೆಯನ್ನೂ ಈಡೇರಿಸದ ಕೇಂದ್ರ ಸರ್ಕಾರ'|

ಬೆಂಗಳೂರು(ಏ.13): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಪ್ರಚಾರಕ್ಕೆ ಬರಲಿದ್ದಾರೆ. ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಪ್ರಧಾನಿ ಮೋದಿ ಬೆಂಗಳೂರು ಭೇಟಿಯನ್ನು ಸ್ವಾಗತಿಸಿದ್ದಾರೆ.

ಆದರೆ ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡಿದಾಗ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಬಿಜೆಪಿ ನೀಡಿದ್ದ ಭರವಸೆಯ ಏನಾಯ್ತು ಎಂಬುದರ ಕುರಿತು ಮೋದಿ ಉತ್ತರಿಸಲಿ ಎಂದು ಕೃಷ್ಣಭೈರೇಗೌಡ ಆಗ್ರಹಿಸಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ಕೃಷ್ಣಭೈರೇಗೌಡ, ಬೆಂಗಳೂರು ಅಭಿವೃದ್ಧಿಗಾಗಿ 2014ರಲ್ಲಿ ಬಿಜೆಪಿ ನೀಡಿದ್ದ ಪ್ರಮುಖ 6 ಯೋಜನೆಗಳ ಪರಿಸ್ಥಿತಿ ಕುರಿತು ಮೋದಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

Scroll to load tweet…

1. ಬೆಂಗಳೂರಿನ ಕಸ ನಿರ್ವಹಣೆಗಾಗಿ ಪುನರ್ ಸಂಸ್ಕರಣ ಘಟಕಗಳ ಸ್ಥಾಪನೆ. ಉಪನಗರಗಳ ಸ್ಥಾಪನೆಗೆ, ಒಳಚರಂಡಿ ನೀರು ಸಂಸ್ಕರಣೆ ಮತ್ತು ಪುನರ್ ಬಳಕೆಯ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರೂ. ಮೀಸಲು.

2. ಬೆಂಗಳೂರು ನಗರದ ನೆಲಮಂಗಲ ಸಮೀಪ 250 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ವಿಶೇಷ ಅನುದಾನ. ಯಲಹಂಕ ಬಳಿಯ ಪವರ್ ಪ್ಲ್ಯಾಂಟ್ ಪುನಶ್ಚೇತನದ ಭರವಸೆ.

3. ಬೆಂಗಳೂರಿನಿಂದ ದೇಶದ ಇತರ ಪ್ರಮುಖ ನಗರಗಳಿಗೆ ಬುಲೆಟ್ ಟ್ರೈನ್ ಭರವಸೆ.

4. ಬೆಂಗಳೂರಿಗೆ ಮಾನೋ ರೈಲು ಭರವಸೆ.

5. ಕೇಂದ್ರೀಯ ವಿದ್ಯಾಲಯಗಳಲ್ಲಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಶಿಕ್ಷಣ ನೀಡಲು ಹೆಚ್ಚಿನ ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಯ ಭರವಸೆ.

6. ಬೆಂಗಳೂರು ನಗರಕ್ಕೆ ಐಐಟಿ ಸ್ಥಾಪನೆಯ ಕನಸನ್ನು ಸಾಕಾರಗೊಳಿಸುವುದು.

7.ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 1 ಸಾವಿರ ಕೋಟಿ ರೂ. ಅನುದಾನ.

Scroll to load tweet…

2014ರ ಬಿಜೆಪಿ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿಗಾಗಿ ಈ ಮೇಲಿನ ಭರವಸೆ ನೀಡಲಾಗಿತ್ತಾದರೂ ಇದುವರೆಗೂ ಒಂದೂ ಭರವಸೆ ಈಡೇರಿಲ್ಲ ಎಂದು ಕೃಷ್ಣಭೈರೇಗೌಡ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಇವುಗಳ ಕುರಿತು ಉತ್ತರಿಸುವಂತೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.