ಕುಂದಗೋಳ: ವರ್ಕೌಟ್ ಆಗೋದು ಶಿವಳ್ಳಿ ಸಾವಿನ ಅನುಕಂಪವೋ? ಬಿಜೆಪಿ ಅಲೆಯೋ?

ಕಾಂಗ್ರೆಸ್ಸಿನ ಕುಸುಮಾಗೆ ಪತಿ ಶಿವಳ್ಳಿ ಸಾವಿನ ಅನುಕಂಪ | ಬಿಜೆಪಿಯ ಚಿಕ್ಕನಗೌಡರಗೆ ಕಡಿಮೆ ಅಂತರದ ಸೋಲಿನ ಕನಿಕರ | ಬಿಎಸ್ ವೈ , ಡಿಕೆಶಿಗೆ ಪ್ರತಿಷ್ಠೆಯ ಪರೀಕ್ಷೆ 

Congress-BJP tough fight in Kundagola By-Election

ಹುಬ್ಬಳ್ಳಿ (ಮೇ. 15):  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಪರ್ವತಗಳೆನಿಸಿದ ಭಾರತ ರತ್ನ ಡಾ.ಭೀಮಸೇನ ಜೋಶಿ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್‌ ಅವರು ಗಾಯಕರಾಗಿ ರೂಪಗೊಂಡದ್ದು ಧಾರವಾಡ ಜಿಲ್ಲೆ ಕುಂದಗೋಳದ ಪಂ.ಸವಾಯಿ ಗಂಧರ್ವ ಗರಡಿಯಲ್ಲಿ. ಈ ಗರಡಿಯಲ್ಲೀಗ ರಾಜಕೀಯ ತಾಲೀಮು, ಆಲಾಪ ಬಲು ಜೋರಾಗಿ ನಡೆದಿದ್ದು, ‘ಗಂಧರ್ವ’ ಪಟ್ಟಯಾರಿಗೆ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ.

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ನಿಧನದ ಹಿನ್ನೆಲೆಯಲ್ಲಿ ಎದುರಾಗಿರುವ ಈ ಉಪ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಕುಸುಮಾವತಿ ಅವರೇ ಗೆಲ್ಲುತ್ತಾರೆಂದು ಕಾಂಗ್ರೆಸ್‌ ಗೇಮ್‌ ಪ್ಲಾನ್‌ ಮಾಡಿದ್ದರೆ, ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಶಿವಳ್ಳಿ ಎದುರು ಪರಾಜಿತಗೊಂಡ ಎಸ್‌.ಐ. ಚಿಕ್ಕನಗೌಡರ ಅವರನ್ನೇ ಬಿಜೆಪಿ ಹುರಿಯಾಳು ಮಾಡಿದೆ. ಸದ್ಯ ಕ್ಷೇತ್ರದಲ್ಲಿ ಈ ಇಬ್ಬರೂ ಅಭ್ಯರ್ಥಿಗಳ ಹೆಸರಿನಲ್ಲಿ ಉಭಯ ಪಕ್ಷಗಳ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಮಬಲದ ಹೋರಾಟ ನಡೆದಿದೆ.

ದಿನ ಬೆಳಗಾದರೆ ಕಾಂಗ್ರೆಸ್‌-ಜೆಡಿಎಸ್‌ ಹಾಗೂ ಬಿಜೆಪಿಯ ರಾಜ್ಯ ಮಟ್ಟದ ಮುಖಂಡರು ಕುಂದಗೋಳ ಕ್ಷೇತ್ರದ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದಾರೆ. ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿರುವ ಕುಂದಗೋಳದಲ್ಲಿ ಸದ್ಯ ಭೀಕರ ಬರಗಾಲವಿದೆ. ಆದರೆ, ಈ ಊರಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಉಪಚುನಾವಣೆ ನಡೆಯುತ್ತಿದ್ದು, ಕ್ಷೇತ್ರದಲ್ಲಿ ರಾಜಕೀಯ ಅಬ್ಬರಕ್ಕೆ ಮಾತ್ರ ಒಂಚೂರೂ ಬರವಿಲ್ಲದಂತಾಗಿದೆ!

ಮಹಿಳೆಯರೂ ಒಮ್ಮೆಯೂ ಗೆದ್ದಿಲ್ಲ

ಇತಿಹಾಸ ಗಮನಿಸಿದಾಗ ಇಷ್ಟುವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಶಾಸಕರಾಗಿದ್ದವರು ಚುನಾವಣೆ ಎದುರಿಸಿ ಗೆದ್ದಿದ್ದು ಬರೀ ಎರಡೇ ಬಾರಿ. ಪ್ರತಿ ಸಲ ಬದಲಾವಣೆ ಬಯಸುವ ಕ್ಷೇತ್ರವಿದು. 1957ರಿಂದ 2018ರವರೆಗೆ ಬರೋಬ್ಬರಿ 14 ಬಾರಿ ಈ ಕ್ಷೇತ್ರ ಚುನಾವಣೆ ಎದುರಿಸಿದೆ.

1957 ಮತ್ತು 1962ರಲ್ಲಿ ನಡೆದ ಚುನಾವಣೆಯಲ್ಲಿ ಸತತ ಟಿ.ಕೆ.ಕಂಬಳಿ ಹಾಗೂ 2013, 2018ರಲ್ಲಿ ಸಿ.ಎಸ್‌. ಶಿವಳ್ಳಿ ಸತತ ಎರಡು ಬಾರಿ ಆಯ್ಕೆಯಾದ ಶಾಸಕರು. ಈ ನಾಲ್ಕು ಚುನಾವಣೆಗಳನ್ನು ಹೊರತುಪಡಿಸಿದರೆ ಪ್ರತಿ ಚುನಾವಣೆಯಲ್ಲೂ ಬದಲಾವಣೆ ಬಯಸಿ ಹಾಲಿ ಶಾಸಕರನ್ನು ಸೋಲಿಸಿದ್ದಾರೆ ಇಲ್ಲಿನ ಮತದಾರರು.

ಕೆಲವರು ಒಮ್ಮೆ ಬಿಟ್ಟು ಮತ್ತೊಮ್ಮೆ ಗೆಲುವು ಸಾಧಿಸಿದ್ದುಂಟು. ಆದರೆ ನಿರಂತರವಾಗಿ ಆಯ್ಕೆಯಾಗಿಲ್ಲ. ಈವರೆಗೂ ಈ ಕ್ಷೇತ್ರವನ್ನು ಮಹಿಳೆಯರೂ ಪ್ರತಿನಿಧಿಸಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಮತ್ತೆ ಮತ್ತೆ ಗೆಲ್ಲುವಲ್ಲಿ ವಿಫಲವಾದವರೇ ಹೆಚ್ಚು.

ಬಿಜೆಪಿ ವರ್ಸಸ್‌ ಮೈತ್ರಿ

ಇದೇ ಮೊದಲ ಬಾರಿಗೆ ಉಪಚುನಾವಣೆ ಎದುರಿಸುತ್ತಿರುವ ಕ್ಷೇತ್ರದಲ್ಲಿ ಶಿವಳ್ಳಿ ಪತ್ನಿ ಕುಸುಮಾವತಿ ಪರ ತಕ್ಕ ಮಟ್ಟಿಗೆ ಅನುಕಂಪವಿದೆ. ಇದರೊಂದಿಗೆ ಕಾಂಗ್ರೆಸ್‌ನ ಉಸ್ತುವಾರಿ ವೇಣುಗೋಪಾಲ, ಕ್ಷೇತ್ರ ಉಸ್ತುವಾರಿ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ್‌, ಸಚಿವ ಸತೀಶ್‌ ಜಾರಕಿಹೊಳಿ ಸೇರಿದಂತೆ ರಾಜ್ಯ ಮಟ್ಟದ ಮುಖಂಡರು ಕುಂದಗೋಳಕ್ಕೆ ಲಗ್ಗೆ ಇಟ್ಟಿದ್ದು, ಕುಸುಮಾವತಿ ಪರ ತೀವ್ರ ಪ್ರಚಾರ ನಡೆಸುತ್ತಿದ್ದಾರೆ.

ಜೊತೆಗೆ ತುಸು ಮಟ್ಟಿಗೆ ಜೆಡಿಎಸ್‌ ಬೆಂಬಲವೂ ಇದ್ದು, ಸ್ಥಳೀಯವಾಗಿ ಬಸವರಾಜ ಹೊರಟ್ಟಿ, ಎನ್‌.ಎಚ್‌. ಕೋನರಡ್ಡಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಸೋಮವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕುಂದಗೋಳಕ್ಕೆ ಭೇಟಿ ನೀಡಿದ್ದು ಕಾಂಗ್ರೆಸ್‌ಗೆ ಬಲ ಬಂದಂತಾಗಿದೆ.

ಇನ್ನು ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಪರ ಪ್ರಚಾರವೇನೂ ಕಮ್ಮಿ ಇಲ್ಲ. ಕಳೆದ ಬಾರಿ ಅತಿ ಸಮೀಪದಿಂದ ಸೋಲು ಕಂಡಿದ್ದು, ಈ ಬಾರಿ ಗೆಲ್ಲಿಸಲೇಬೇಕೆಂದು ಚಿಕ್ಕನಗೌಡರ ಅವರ ಸಂಬಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕುಂದಗೋಳದಲ್ಲಿ ಮೂರು ದಿನ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇವರೊಂದಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಸಿ.ಸಿ.ಪಾಟೀಲ್‌ ಸೇರಿದಂತೆ ಇಡೀ ಬಿಜೆಪಿ ತಂಡವೇ ಕೈ ಜೋಡಿಸಿದೆ.

ಯಡಿಯೂರಪ್ಪ, ಡಿಕೆಶಿಗೆ ಪ್ರತಿಷ್ಠೆ

ಒಂದು ವೇಳೆ ಕಾಂಗ್ರೆಸ್‌ ಗೆದ್ದರೆ ಡಿ.ಕೆ.ಶಿವಕುಮಾರ್‌ ಮತ್ತೊಮ್ಮೆ ‘ಟ್ರಬಲ್‌ ಶೂಟರ್‌’ ಎಂಬುದು ಸಾಬೀತಾಗಿ ಪಕ್ಷ ಹಾಗೂ ಹೈಕಮಾಂಡ್‌ನಲ್ಲಿ ಇನ್ನಷ್ಟುಹಿಡಿತ ಸಾಧಿಸುತ್ತಾರೆ. ಇನ್ನು ಬಿಜೆಪಿ ಗೆದ್ದರೆ ಅದರ ಕ್ರೆಡಿಟ್‌ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಇಡೀ ಬಿಜೆಪಿ ಹೈಕಮಾಂಡ್‌ಗೆ ಸಲ್ಲುತ್ತದೆ. ಯಾವ ಪಕ್ಷದ ಅಭ್ಯರ್ಥಿ ಸೋತರೂ ಇಲ್ಲಿ ಅಭ್ಯರ್ಥಿ ಸೋಲಿಗಿಂತ ಆ ಪಕ್ಷದ ಉಸ್ತುವಾರಿಗಳ ಸೋಲು ಎನ್ನುವಂತೆ ಬಿಂಬಿತವಾಗುವುದು ತಪ್ಪುವುದಿಲ್ಲ. ಹಾಗಿದೆ ಇಲ್ಲಿನ ಚುನಾವಣಾ ಖದರು.

ಎಲ್ಲದಕ್ಕೂ ಹೆಚ್ಚಾಗಿ ಇಲ್ಲಿನ ಸೋಲು-ಗೆಲುವು ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿಯಾಗಲಿದೆ ಎನ್ನುವುದನ್ನು ಉಭಯ ಪಕ್ಷಗಳು ಮಾನಸಿಕವಾಗಿ ಒಪ್ಪಿಕೊಂಡಿವೆ. ಹಾಗಾಗಿ ಈ ಉಪಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಬಿಜೆಪಿ ನಾಯಕರು ತಪ್ಪದೇ ಪ್ರಚಾರದ ವೇಳೆ ಜನತೆಯಲ್ಲಿ ಮನವಿ ಮಾಡುತ್ತಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮುಖಂಡರೂ ಕೂಡ ರಾಜ್ಯದಲ್ಲಿನ ಮೈತ್ರಿ ಸರ್ಕಾರ ಮುಂದುವರೆಯಲು ಈ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವುದು ಅನಿವಾರ್ಯವಿದೆ ಎನ್ನುವ ಮಾತುಗಳನ್ನು ಆಡುತ್ತಿದ್ದರಿಂದ ಇಲ್ಲಿ ಅಭ್ಯರ್ಥಿಗಳಾದ ಕುಸುಮಾವತಿ-ಚಿಕ್ಕನಗೌಡರ್‌ ಪ್ರಭಾವ ಗೌಣವಾಗಿ ಬಿಜೆಪಿ ವರ್ಸಸ್‌ ಮೈತ್ರಿ ಸರ್ಕಾರ ಎನ್ನುವಂತಾಗಿದೆ.

ಬರ ಇದ್ದರೂ ಚುನಾವಣೆ ವಿಷಯವಲ್ಲ

ಹಾಗೆ ನೋಡಿದರೆ ಭೀಕರ ಬರ ಎದುರಿಸುತ್ತಿರುವ ಕುಂದಗೋಳ ಕ್ಷೇತ್ರದಲ್ಲಿ ಕೃಷಿ ಯೋಜನೆಗಳು, ಕುಡಿಯುವ ನೀರಿನ ಸಮಸ್ಯೆಯ ಪರಿಹಾರ, ಬರ ಪರಿಹಾರ ಕಾಮಗಾರಿ ಕುರಿತಾದ ವಿಷಯಗಳು ಚುನಾವಣಾ ವಿಷಯಗಳಾಗಬೇಕಿತ್ತು. ಆದರೆ ಇಲ್ಲಿನ ಚುನಾವಣೆ ವಿಷಯಗಳೇ ಬೇರೆಯಾಗಿವೆ. ಶಿವಳ್ಳಿ ಆತ್ಮಕ್ಕೆ ಶಾಂತಿ ನೀಡಬೇಕೆಂದರೆ ಅವರ ಪತ್ನಿಗೆ ಮತ ಹಾಕಿ ಎಂದು ಕಾಂಗ್ರೆಸ್‌ ಭಾವನಾತ್ಮಕತೆ ಪ್ರಯೋಗಿಸಿ ಧಾರಾಕಾರವಾಗಿಯೇ ಕಣ್ಣೀರು ಹರಿಸಿದ್ದುಂಟು.

ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಶಿವಳ್ಳಿ ಬದುಕಿದ್ದಾಗ ಕನಿಕರ ಪಡಲಿಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗಲೇ ಶಿವಳ್ಳಿಗೆ ಮಂತ್ರಿ ಸ್ಥಾನ ಲಭಿಸಲಿಲ್ಲ. ಇದೆಲ್ಲ ಮೊಸಳೆ ಕಣ್ಣೀರು ಎಂದು ಟಾಂಗ್‌ ಕೊಡುತ್ತಿದೆ. ಜತೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆ ತರಲು ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿಸಲು ಬಿಜೆಪಿಗೆ ಮತ ಚಲಾಯಿಸಿ ಎಂದು ಹೇಳುತ್ತಿದೆ. ಒಟ್ಟಿನಲ್ಲಿ ಎರಡೂ ಪಕ್ಷಗಳು ಪರಸ್ಪರ ಹಗ್ಗಜಗ್ಗಾಟದಲ್ಲಿ ತೊಡಗಿ ಬರದ ಭೀಕರತೆಯನ್ನು ಮರೆಸಿವೆ.

ಲಿಂಗಾಯತರೇ ನಿರ್ಣಾಯಕ

189281 ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ 75 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಲಿಂಗಾಯತ ಮತದಾರರಿದ್ದು, ಅವರೇ ನಿರ್ಣಾಯಕ. ಹಾಗಂತ ಬರೀ ಲಿಂಗಾಯತ ಸಮುದಾಯದವರನ್ನೇ ಇಲ್ಲಿಂದ ಆರಿಸಿ ಕಳುಹಿಸಿಲ್ಲ. ಬದಲಿಗೆ ಎಲ್ಲ ವರ್ಗದವರಿಗೂ ಅವಕಾಶ ಕೊಟ್ಟಿರುವುದು ಈ ಕ್ಷೇತ್ರದ ವಿಶೇಷ.

ಉಳಿದಂತೆ ಸರಿಸುಮಾರು 35 ಸಾವಿರ ಕುರುಬರು, 30 ಸಾವಿರ ಅಲ್ಪಸಂಖ್ಯಾತರು, ಪರಿಶಿಷ್ಟಜಾತಿ ಹಾಗೂ ಪಂಗಡ ಸೇರಿ 25ಕ್ಕೂ ಹೆಚ್ಚು, ಗಂಗಾಮತಸ್ಥರು 6 ಸಾವಿರ ಮತದಾರರಿದ್ದಾರೆ. ಇನ್ನು ಅತಿ ಕಡಿಮೆ ಮತದಾರರೆಂದರೆ ಬ್ರಾಹ್ಮಣರು. ಬರೀ 2 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ.

ನೀರಿಗಾಗಿ ಹೊಡೆದಾಡುವ ಸ್ಥಿತಿ

ಈ ಕ್ಷೇತ್ರದಲ್ಲಿ ಫಲವತ್ತಾದ ಕಪ್ಪು ಮಣ್ಣು ಇದೆ. ಆದರೆ, ನೀರಿನ ಕೊರತೆ ಇದೆ. ಇರುವ ನೀರೂ ಸಹ ಅತಿಯಾದ ಫೆä್ಲೕರೈಡ್‌ನಿಂದ ಕೂಡಿದೆ. ಅಂತರ್ಜಲ ಕುಸಿತ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ನಿರಂತರ ಬರ ಎದುರಿಸುತ್ತಿರುವ ತಾಲೂಕಿದು. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಟ್ಯಾಂಕರ್‌ ಬಂದರೆ ಹೊಡೆದಾಡಿಕೊಂಡು ನೀರು ತುಂಬಬೇಕಾದ ಪರಿಸ್ಥಿತಿ. ಕೆರೆಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ವಿದ್ಯುತ್‌ ಸಮಸ್ಯೆಯ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ನೀಗಿಲ್ಲ. ಹೂಳು ತೆಗೆಯದ ಕೆರೆಗಳು, ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕಗಳು ಜನರ ನಿದ್ದೆ ಕೆಡಿಸಿವೆ. ಸದ್ಯ, ಕುಂದಗೋಳ ಪಟ್ಟಣಕ್ಕೆ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ನೀರು ಜೀವಜಲವಾಗಿದೆ. 14 ಶಾಸಕರನ್ನು ಕಂಡರೂ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

1.89 ಲಕ್ಷ ಮತದಾರರು

ಹುಬ್ಬಳ್ಳಿಯ 32, ಕುಂದಗೋಳ ತಾಲೂಕಿನ 65ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಬರೋಬ್ಬರಿ 189281 ಮತದಾರರಿದ್ದಾರೆ. ಇದರಲ್ಲಿ 97820 ಜನ ಪುರುಷರಿದ್ದರೆ, 91820 ಮಹಿಳಾ ಮತದಾರರಿದ್ದಾರೆ.

2018ರ ಚುನಾವಣಾ ಫಲಿತಾಂಶ

ಹೆಸರು​-ಪಕ್ಷ-ಪಡೆದ ಮತ

ಸಿ.ಎಸ್‌.ಶಿವಳ್ಳಿ-ಕಾಂಗ್ರೆಸ್‌-64871

ಎಸ್‌.ಐ.ಚಿಕ್ಕನಗೌಡ-ಬಿಜೆಪಿ-64237

ಹಜರತ ಅಲಿ ಶೇಖ ಜೋಡಮನಿ-ಜೆಡಿಯು-7318

ಎಂ.ಎಸ್‌.ಅಕ್ಕಿ-ಜೆಡಿಎಸ್‌-6280

ಒಟ್ಟು 12 ಜನ ಅಭ್ಯರ್ಥಿಗಳಿದ್ದರು

 

Latest Videos
Follow Us:
Download App:
  • android
  • ios