ಇವಿಎಂ ಸರಿ ಇಲ್ಲವೆಂದು ಚಾಲೇಂಜ್ ವೋಟ್ ಮಾಡಿದ ಮತದಾರನ ಮೇಲೆ ಕೇಸ್
ಇವಿಎಂ ಮೇಲೆ ದೋಷ ಹೊರಿಸಿ ಚಾಲೇಂಜ್ ಮತದಾನ ಮಾಡಿದ ವ್ಯಕ್ತಿಯೋರ್ವನನ್ನು ಬಂಧಿಸಿ ಬಿಡುಗಡೆ ಮಾಡಿದ ಪ್ರಕರಣ ಪಡುಬಿದ್ರಿಯಲ್ಲಿ ನಡೆದಿದೆ.
ಪಡುಬಿದ್ರಿ: ಇವಿಎಂ ಸರಿ ಇಲ್ಲ ಎಂದು ಸುಳ್ಳು ಹೇಳಿ ಚಾಲೆಂಜ್ ವೋಟ್ ಮಾಡಿದ ಮತದಾರರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ನಡೆದಿದೆ. ಇಲ್ಲಿನ ಎಲ್ಲೂರು ಶಾಲೆಯ ಮತಗಟ್ಟೆಯಲ್ಲಿ ಲ್ಯಾನ್ಸಿ ವೀರೇಂದ್ರ ಡಿಸೋಜ ಎಂಬುವರು ತಾನು ಮತದಾನ ಮಾಡಿದ ಪಕ್ಷದ ಚಿಹ್ನೆ ವಿವಿಪ್ಯಾಟ್‌ನಲ್ಲಿ ಕಾಣಿಸಿಲ್ಲ.
ಆದ್ದರಿಂದ ತನ್ನ ಮತ ಬೇರೊಬ್ಬ ಅಭ್ಯರ್ಥಿಗೆ ಹೋಗಿದೆ. ಇವಿಎಂ ಸರಿಯಾಗಿಲ್ಲ ಎಂದು ಆರೋಪಿಸಿದರು. ಆಗ ಅಧಿಕಾರಿಗಳು ನಿಯಮದಂತೆ ನಿಗದಿತ ಫಾರಂನಲ್ಲಿ ವಿವರ ದಾಖಲಿಸಿ ಪಕ್ಷದ ಏಜೆಂಟ್ ಸಮ್ಮುಖದಲ್ಲಿ ಅದೇ ಇವಿಎಂನಲ್ಲಿ ಚಾಲೆಂಜ್ ವೋಟಿಂಗ್ ನಡೆಸಲು ಹೇಳಿದರು. ಆಗ ಸರಿಯಾಗಿ ಮತ ಚಲಾವಣೆಯಾಯಿತು.
ಇದರಿಂದ ಅವರು ಸುಳ್ಳು ಆರೋಪಿಸಿದ್ದಾರೆ ಎಂದು ಹೇಳಿ ಜನಪ್ರತಿನಿಧಿ ಕಾಯ್ದೆಯ 49 ಎಂಎ ಪ್ರಕಾರ ಮತಗಟ್ಟೆ ಅಧಿಕಾರಿ ಅವರು ಪಡುಬಿದ್ರಿ ಠಾಣೆಗೆ ದೂರು ನೀಡಿದರು. ತಕ್ಷಣ ಪೊಲೀಸರು ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಕಾಪು ತಾಲೂಕು ಚುನಾವಣಾಧಿಕಾರಿ ನಾಗರಾಜ್ ಹೇಳಿದ್ದಾರೆ.